ADVERTISEMENT

ಹಸುಗೂಸುಗಳ ಸಾವಿನ ಸಂಖ್ಯೆ 16ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 11:23 IST
Last Updated 2 ಜನವರಿ 2014, 11:23 IST

ಮಾಲ್ಡಾ, ಪಶ್ವಿಮ ಬಂಗಾಳ (ಪಿಟಿಐ): ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ಮತ್ತೆ ಮೂರು ಹಸುಗೂಸುಗಳು ಸಾವನ್ನಪ್ಪಿದ್ದು, ಕಳೆದ ಮೂರು ದಿನಗಳಲ್ಲಿ ಮೃತಪಟ್ಟ ಕೂಸುಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಉಸಿರಾಟ ಸಂಬಂಧಿ ಸಮಸ್ಯೆ, ಕಡಿಮೆ ತೂಕ ಹಾಗೂ ಸೋಂಕಿನಿಂದಾಗಿ ಮೂರು ಹಸುಗೂಸುಗಳು ಮೃತಪಟ್ಟಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಾಲ್ಡಾ ಜಿಲ್ಲೆಯ ಚಂಚೋಲ್, ಹಬೀಬ್‌ಪುರ ಮತ್ತು ಪಂಕಾ ಪ್ರದೇಶದ 75 ಕೂಸುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿವೆ.

ADVERTISEMENT

ಏತನ್ಮಧ್ಯೆ, ಆಸ್ಪತ್ರೆಯಲ್ಲಿ ತಮ್ಮ ಮಗು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ನಡೆಸುವಂತೆ ಪೊಲೀಸರು ಸೂಚಿಸಿದ್ದಾರೆ.

‘ಬುಧವಾರ ಒಂದು ‘ಗಂಡು’ ಮಗುವಿಗೆ ಜನ್ಮ ನೀಡಿದ್ದೆ. ನನ್ನನ್ನು ಉಪಚರಿಸಿದ್ದ ದಾದಿಯರು ಅದನ್ನೇ ಹೇಳಿದ್ದರು. ಆದರೆ ಇದೀಗ ಆಸ್ಪತ್ರೆಯವರು ಹೆಣ್ಣು ಮಗು ಎಂದು ಹೇಳುತ್ತಿದ್ದಾರೆ’ ಎಂದು ಮೆಹೆರಪುರ ಗ್ರಾಮದ ತುಂತುಣಿ ಚೌಧರಿ ಎಂಬ ಮಹಿಳೆ ಆರೋಪಿಸಿದ್ದರು.

ಈ ಸಂಬಂಧ ಮಹಿಳೆಯ ಪತಿ ಇಂಗ್ಲಿಷ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ಆದರೆ ಆಸ್ಪತ್ರೆಯ ಅಧಿಕಾರಿಗಳು ಮಾತ್ರ, ಮಹಿಳೆಯ ಆರೋಪ ಅಲ್ಲಗಳೆಯುವ ಜತೆಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.