ADVERTISEMENT

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಭಯವಿಲ್ಲ: ಭಾರತ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 12:20 IST
Last Updated 11 ಏಪ್ರಿಲ್ 2012, 12:20 IST
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಭಯವಿಲ್ಲ: ಭಾರತ
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಭಯವಿಲ್ಲ: ಭಾರತ   

ನವದೆಹಲಿ (ಪಿಟಿಐ): ಇಂಡೋನೇಷ್ಯಾದ ಉತ್ತರ ಸುಮಾತ್ರಾ ಸಮೀಪ ಪಶ್ಚಿಮ ಕರಾವಳಿಯಾಚೆ ಕಡಲಗರ್ಭದಲ್ಲಿ ರಿಕ್ಟರ್ ಮಾಪಕದಲ್ಲಿ 8.9 ತೀವ್ರತೆಯ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಹಿಂದೂ ಮಹಾ ಸಾಗರ ಪ್ರದೇಶದ ಯಾವುದೇ ಭಾಗದಲ್ಲಿ ಸುನಾಮಿ ರಕ್ಕಸ ಅಲೆಗಳು ಏಳುವ ಸಾಧ್ಯತೆಗಳು ಇಲ್ಲ ಎಂದು ಭಾರತ ಬುಧವಾರ ಹೇಳಿದೆ.

ಭೂಕಂಪದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಾದ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಅಂಡಮಾನ್ ಹಾಗೂ  ನಿಕೋಬಾರ್ ದ್ವೀಪಗಳಲ್ಲಿ ಸುನಾಮಿ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿತ್ತು.

ನಂತರ ಈ ಎರಡೂ ಸಂಸ್ಥೆಗಳು ಹೊರಡಿಸಿದ ಪ್ರಕಟಣೆಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ರಾಷ್ಟ್ರದ ಬೇರಾವುದೇ ಭಾಗದಲ್ಲಿ ಸುನಾಮಿ ಸಾಧ್ಯತೆಗಳು ಇಲ್ಲ ಎಂದು ಸ್ಪಷ್ಟ ಪಡಿಸಿವೆ.

~ಯಾವುದೇ ನಿರ್ದಿಷ್ಟ ಬೆದರಿಕೆ ಇಲ್ಲ. ಕೇವಲ ಗಮನಿಸುವ ಹಾಗೂ ಎಚ್ಚರಿಕೆಯಿಂದ ಇರುವ ಕೆಲಸವನ್ನು ಮಾತ್ರ ನಿರ್ವಹಿಸುತ್ತಿದ್ದೇವೆ. ಹಿಂದೂ ಮಹಾಸಾಗರದಲ್ಲಿ ಯಾವುದೇ ಸುನಾಮಿ ಅಲೆಗಳು ಏಳುವ ಸಾಧ್ಯತೆಗಳು ಇಲ್ಲ~ ಎಂದು ರಾಷ್ಟ್ರೀಯ ವಿಪತ್ತು  ನಿರ್ವಹಣಾ ಪ್ರಾಧಿಕಾರ (ಎನ್ ಡಿ ಎಂ ಎ) ಉಪಾಧ್ಯಕ್ಷ ಶಶಿಧರ ರೆಡ್ಡಿ ಪಿಟಿಐಗೆ ತಿಳಿಸಿದವು.

ಸುಮಾತ್ರಾ ದ್ವೀಪದಲ್ಲಿ ಸಂಭವಿಸಿದ ಭೂಕಂಪವು ಸಾಮಾನ್ಯವಾಗಿ ಸುನಾಮಿ ಅಲೆಗಳನ್ನು ಸೃಷ್ಟಿಸುವಂತಹ ಮಾದರಿಯ ಭೂಕಂಪವಲ್ಲ ಎಂದು ಅವರು ನುಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.