ADVERTISEMENT

ಹಿಂಬಡ್ತಿ ಭೀತಿಯಿಂದ ದೂರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 5:11 IST
Last Updated 16 ಜೂನ್ 2018, 5:11 IST
ಹಿಂಬಡ್ತಿ ಭೀತಿಯಿಂದ ದೂರ
ಹಿಂಬಡ್ತಿ ಭೀತಿಯಿಂದ ದೂರ   

ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಹಿಂಬಡ್ತಿಗೆ ಗುರಿಯಾಗಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿತ ಕಾಯಲು ರಾಜ್ಯ ಸರ್ಕಾರ ರೂಪಿಸಿದ್ದ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ಇದರಿಂದಾಗಿ, 3,799 ನೌಕರರು ಹಿಂಬಡ್ತಿ ‘ಶಿಕ್ಷೆ’ ಯಿಂದ ಪಾರಾಗಲಿದ್ದಾರೆ.

ಈಗಾಗಲೇ ಹಿಂಬಡ್ತಿಗೆ ಗುರಿಯಾಗಿರುವ ನೌಕರರು, ಬಡ್ತಿ ಮೀಸಲಾತಿ ಕಾಯ್ದೆ ಅನ್ವಯ ಈ ಹಿಂದೆ ಹೊಂದಿದ್ದ ಹುದ್ದೆಯಲ್ಲಿಯೇ ಮುಂದುವರಿಯುವ ಅವಕಾಶ ಸಿಗಲಿದೆ. ಆದರೆ, ಇದು ಸೂಪರ್ ನ್ಯೂಮರರಿ ಹುದ್ದೆಯಾಗಿದ್ದು, ಮೀಸಲಾತಿ ಕಾಯ್ತೆ ಅನ್ವಯ ಮುಂಬಡ್ತಿ ಪಡೆದ ನೌಕರರು ನಿವೃತ್ತರಾಗುವವರೆಗೆ ಮಾತ್ರ ಈ ಹುದ್ದೆ ಇರಲಿದೆ. ಅವರು ನಿವೃತ್ತರಾದ ಬಳಿಕ ಹುದ್ದೆಗಳು ಅಸ್ತಿತ್ವ ಕಳೆದುಕೊಳ್ಳಲಿವೆ.

‘ಸಂವಿಧಾನದ 201 ನೇ ವಿಧಿಯನ್ವಯ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ’ ಎಂದು ಕೇಂದ್ರ ಗೃಹ ಖಾತೆ ಅಧೀನ ಕಾರ್ಯದರ್ಶಿ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಪತ್ರ ಬರೆದು ತಿಳಿಸಿದ್ದಾರೆ.

ADVERTISEMENT

2000ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆಯನ್ನು 2017ರ ಫೆಬ್ರುವರಿ 9ರಂದು ರದ್ದು ಪಡಿಸಿದ್ದ ಸುಪ್ರೀಂ ಕೋರ್ಟ್‌, ಪರಿ
ಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು, ಬಡ್ತಿಯಿಂದ ವಂಚಿತರಾದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ನೌಕರರಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನು ಅದೇ ವರ್ಷದ ಆಗಸ್ಟ್‌ 9 ರೊಳಗೆ ಪೂರ್ಣಗೊಳಿಸಲು ಕಟ್ಟಪ್ಪಣೆ ವಿಧಿಸಿತ್ತು.

ನೌಕರರ ಹಿತ ಕಾಯಲು ಮುಂದಾಗಿದ್ದ ರಾಜ್ಯ ಸರ್ಕಾರ 2017ರ ನವೆಂಬರ್‌ನಲ್ಲಿ ನಡೆದ ಅಧಿವೇಶನ ದಲ್ಲಿ ಬಡ್ತಿ ಮೀಸಲಾತಿ ಮಸೂದೆಗೆ ಅಂಗೀಕಾರ ಪಡೆದಿತ್ತು. ಮಸೂದೆ ಜಾರಿಗೊಳಿಸಲು ಹಿಂದಿನ ವರ್ಷದ ಆಗಸ್ಟ್‌ 7ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ, ಇದಕ್ಕೆ ಅನುಮೋದನೆ ನೀಡದ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿದ್ದರು.

‘ರಾಷ್ಟ್ರಪತಿ ಅಂಕಿತ ಸಿಕ್ಕಿರುವುದರಿಂದ ನೌಕರರು ಹಿಂದೆ ಹೊಂದಿರುವ ಹುದ್ದೆಗಳಲ್ಲಿಯೇ ಮುಂದುವರಿಯುತ್ತಾರೆ’ ಎಂದು ಸಂಸದೀಯ ವ್ಯವಹಾರ
ಗಳ ಇಲಾಖೆ ಕಾರ್ಯದರ್ಶಿ ಕೆ.ದ್ವಾರಕನಾಥ ಬಾಬು ತಿಳಿಸಿದ್ದಾರೆ.

ಸೂ‍ಪರ್ ನ್ಯೂಮರರಿ ಹುದ್ದೆ ಎಂದರೇನು?

2017ರಲ್ಲಿ ರಾಜ್ಯ ಸರ್ಕಾರ ತಂದಿರುವ ಬಡ್ತಿ ಮೀಸಲಾತಿ ಮಸೂದೆ ‘ಸೂಪರ್ ನ್ಯೂಮರರಿ’ ಹುದ್ದೆ ಸೃಜಿಸಲು ಅವಕಾಶ ಕಲ್ಪಿಸಿದೆ.

ಸೂಪರ್ ನ್ಯೂಮರರಿ ಎಂದರೆ ಈಗಾಗಲೇ ಮುಂಬಡ್ತಿ ಪಡೆದಿರುವ ನೌಕರರಿಗೆ ಹಿಂಬಡ್ತಿ ನೀಡದೇ ಅದೇ ಶ್ರೇಣಿಯ ಸಮಾನಾಂತರ ಹುದ್ದೆ ಸೃಷ್ಟಿಸುವುದು. ಮುಂಬಡ್ತಿ ಪಡೆದ ನೌಕರರು ಅದೇ ಮಾದರಿಯ ಹುದ್ದೆಯಲ್ಲಿ ನಿವೃತ್ತರಾಗುವವರೆಗೆ ಮುಂದುವರಿಯಲು ಅವಕಾಶ ಇರುತ್ತದೆ.

ಉದಾಹರಣೆಗೆ ಬಡ್ತಿ ಮೀಸಲಾತಿ ಕಾಯ್ದೆಯ ಅನ್ವಯ ಸಾಮಾನ್ಯ ವರ್ಗದ ಅಧಿಕಾರಿಯನ್ನು ಹಿಂದಿಕ್ಕಿ ಪರಿಶಿಷ್ಟ ಜಾತಿ ನೌಕರರೊಬ್ಬರು ಮುಖ್ಯ ಎಂಜಿನಿಯರ್ ಹುದ್ದೆಗೆ ಬಡ್ತಿ ಪಡೆದಿರುತ್ತಾರೆ. ಹಿಂಬಡ್ತಿ ನೀಡಿದರೆ ಸಾಮಾನ್ಯವಾಗಿ ಅವರು ಕಾರ್ಯಪಾಲಕ ಎಂಜಿನಿಯರ್ ಹುದ್ದೆಗೆ ವಾಪಸ್ ಆಗಬೇಕಾಗುತ್ತದೆ. ಇದನ್ನು ತಪ್ಪಿಸಲು, ಅಧಿಕೃತ ಮುಖ್ಯ ಎಂಜಿನಿಯರ್ ಹುದ್ದೆಯನ್ನು ಹಿಂದುಳಿದ ಅಥವಾ ಸಾಮಾನ್ಯ ವರ್ಗದ ನೌಕರರಿಗೆ ನೀಡು
ವುದು. ಅದೇ ಮಾದರಿಯ ಸಮಾನಾಂತರ ಹುದ್ದೆಯಲ್ಲಿ ಬಡ್ತಿ ಮೀಸಲಾತಿ ಪಡೆದವರು ಮುಂದುವರಿಯಲು ನೂತನ ಮಸೂದೆ ಅವಕಾಶ ಒದಗಿಸಲಿದೆ.

ರಾಜ್ಯಗಳಿಗೆ ಕೇಂದ್ರ ಸೂಚನೆ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ನೀಡುವಾಗ ಮೀಸಲಾತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇದೇ 5ರಂದು ನೀಡಿದ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.