ADVERTISEMENT

ಹೆಚ್ಚುವರಿ ವೃತ್ತಿಪರ ಕೋರ್ಸ್ ಅಧ್ಯಯನಕ್ಕೆ ಅವಕಾಶ: ಸಿಬಲ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ನವದೆಹಲಿ: ಪಾಲಿಟೆಕ್ನಿಕ್, ಎಂಜಿನೀಯರಿಂಗ್ ಮತ್ತಿತರ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಜತೆಯಲ್ಲೇ ಇತರ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡಲು  ಮುಂದಿನ ಶೈಕ್ಷಣಿಕ ವರ್ಷದಿಂದ ಅವಕಾಶ ಮಾಡಿಕೊಡಲಾಗುತ್ತಿದೆ.

 ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ ಹೆಚ್ಚುವರಿ ವೃತ್ತಿಪರ ಕೋರ್ಸ್‌ಗಳ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಪಠ್ಯಕ್ರಮವನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆ.

 ವಿದ್ಯಾರ್ಥಿಗಳ ಹೆಚ್ಚುವರಿ ಅಧ್ಯಯನಕ್ಕಾಗಿ ಮಾಹಿತಿ ತಂತ್ರಜ್ಞಾನ, ಮನೋರಂಜನೆ ಉದ್ಯಮ, ದೂರಸಂಪರ್ಕ, ಮೊಬೈಲ್ ಸಂವಹನ, ನಿರ್ಮಾಣ, ಚಿಲ್ಲರೆ ವ್ಯಾಪಾರ, ಆಹಾರ ಸಂಸ್ಕರಣ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಆಭರಣ ವಿನ್ಯಾಸ, ಫ್ಯಾಷನ್ ವಿನ್ಯಾಸ ಇವೇ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.

ಸಂಬಂಧಪಟ್ಟ ಉದ್ಯಮಗಳ ಸಹಭಾಗಿತ್ವದಲ್ಲಿ ಈ ವೃತ್ತಿಪರ ಕೋರ್ಸ್‌ಗಳನ್ನು ನಡೆಸಲಾಗುತ್ತದೆ ಎಂದು ಮಾನವ ಸಂಪನ್ಮೂಲ ಖಾತೆಯ ಸಚಿವ ಕಪಿಲ್ ಸಿಬಲ್ ಅವರು ತಿಳಿಸಿದ್ದಾರೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ ಸಿದ್ಧಪಡಿಸಿರುವ ಹೆಚ್ಚುವರಿ ವೃತ್ತಿಪರ ಕೋರ್ಸ್‌ಗಳ ಪಠ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಸಚಿವರು, ಯಾವುದೆ ಉದ್ಯಮ ಸಂಸ್ಥೆ ಐದು ವಿಭಾಗಗಳಲ್ಲಿ ತಲಾ ನೂರು ವಿದ್ಯಾರ್ಥಿಗಳಂತೆ ಗರಿಷ್ಠ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅವಕಾಶವಿರುತ್ತದೆ ಎಂದಿದ್ದಾರೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹೊಸ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದು, ಇದಕ್ಕೆ ವಯೋಮಿತಿ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.