ADVERTISEMENT

ಹೈದರಾಬಾದಿಗೆ ಕೇಂದ್ರಾಡಳಿತ ಸ್ಥಾನಮಾನ: ಟಿಆರ್ ಎಸ್ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 10:52 IST
Last Updated 4 ಆಗಸ್ಟ್ 2013, 10:52 IST

ಹೈದರಾಬಾದ್ (ಐಎಎನ್ಎಸ್): ಹೈದರಾಬಾದ್ ನ್ನು ಕೇಂದ್ರಾಡಳಿತ ಪ್ರದೇಶವಾಗಿ ಅಥವಾ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕಾಯಂ ಜಂಟಿ ರಾಜಧಾನಿಯಾಗಿ ಮಾಡುವುದನ್ನು ಅಂಗೀಕರಿಸುವ ಸಾದ್ಯತೆಗಳನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಭಾನುವಾರ ಇಲ್ಲಿ ತಳ್ಳಿ ಹಾಕಿದರು.

ಕೇಂದ್ರ ಸರ್ಕಾರ ಪ್ರಕಟಿಸಿದಂತೆ ಆಂಧ್ರ ಪ್ರದೇಶ ಸರ್ಕಾರ 10 ವರ್ಷಗಳ ಅವಧಿಗೆ ಇಲ್ಲಿಂದ ರಾಜ್ಯಭಾರ ಮಾಡುವುದಕ್ಕೆ ತಮ್ಮ ಪಕ್ಷದ ಆಕ್ಷೇಪ ಇಲ್ಲ ಎಂದು ಅವರು ಹೇಳಿದರು. ಆದರೆ ತೆಲಂಗಾಣ ಸರ್ಕಾರವು ಹೈದರಾಬಾದ್ ಆಡಳಿತವನ್ನು ನೋಡಿಕೊಳ್ಳುತ್ತದೆ ಎಂದು ಅವರು ಸ್ಪಷ್ಟ ಪಡಿಸಿದರು.

ತೆಲಂಗಾಣ ರಾಜ್ಯ ರಚನೆಯ ನಿರ್ಧಾರವನ್ನು ಪ್ರತಿಭಟಿಸಿ ಸೀಮಾಂಧ್ರದಲ್ಲಿ (ರಾಯಲಸೀಮಾ ಮತ್ತು ಆಂಧ್ರ ಪ್ರದೇಶ) ಪ್ರತಿಭಟನೆ ಮುಂದುವರಿಯುತ್ತಿದ್ದಂತೆಯೇ ಈ ಪ್ರದೇಶಗಳ ಹಲವಾರು ನಾಯಕರು ಹೈದರಾಬಾದ್ ಗೆ ಕೇಂದ್ರಾಡಳಿತ ಪ್ರದೇಶದ  ಸ್ಥಾನಮಾನ ನೀಡುವ ಸಲಹೆ ಮುಂದಿಟ್ಟಿದ್ದು, ಇದು ತೆಲಂಗಾಣ ಜನತೆಗೆ ಸ್ವಾಗತಾರ್ಹ ಅಲ್ಲ ಎಂದು ರಾವ್ ನುಡಿದರು.

ತೆಲಂಗಾಣ ಪತ್ರಕರ್ತರ ವೇದಿಕೆ ಸಂಘಟಿಸಿದ್ದ ಪತ್ರಿಕಾಭೇಟಿ ಕಾರ್ಯಕ್ರಮದಲ್ಲಿ ಕೆಸಿಆರ್ ಎಂದೇ ಜನಪ್ರಿಯರಾದ ಚಂದ್ರಶೇಖರ ರಾವ್ ಮಾತನಾಡುತ್ತಿದ್ದರು.

ಸೀಮಾಂಧ್ರದಲ್ಲಿನ ಪ್ರತಿಭಟನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ 'ಅದನ್ನು ನಿಭಾಯಿಸುವುದು ಅವರ ಸರ್ಕಾರಕ್ಕೆ ಬಿಟ್ಟ ವಿಷಯವಾದ್ದರಿಂದ ನಾನು ಅದರ ಬಗ್ಗೆ ಚಿಂತಿಸುವುದಿಲ್ಲ' ಎಂದು ರಾವ್ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.