ADVERTISEMENT

ಹೊರಗಿನ ಗ್ರಾಮದ ಯುವಕರಿಗೆ ಹೆಣ್ಣು ನೀಡದ ಗ್ರಾಮಸ್ಥರು

ಏಜೆನ್ಸೀಸ್
Published 19 ಮೇ 2017, 12:43 IST
Last Updated 19 ಮೇ 2017, 12:43 IST
ಔರ್ದಾ ಗ್ರಾಮ
ಔರ್ದಾ ಗ್ರಾಮ   

ರಾಯಗಢ: ವಿವಾಹ ನಿಶ್ಚಯವಾಗುವುದಕ್ಕೂ ಮೊದಲು ವಧುವಿನ ಮತ್ತು ಆಕೆಯ ಕಡೆಯವರ ಬಗ್ಗೆ ಮಾಹಿತಿ ಕಲೆ ಹಾಕಲು ವರನ ಕಡೆಯವರೂ ಹುಡುಗನ ಬಗ್ಗೆ ತಿಳಿಯಲು ಹುಡುಗಿಯ ಕಡೆಯವರೂ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಹುಡುಗನ ಲಕ್ಷಣಗಳೇನು? ಹಿನ್ನೆಲೆಯೇನು? ಸಚ್ಚಾರಿತ್ರ್ಯವಂತನೇ...? ಹೀಗೆ ಸಂಗ್ರಹಿಸಬೇಕಾದ ವಿಷಯಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ವಿಶೇಷವೆಂದರೆ, ಛತ್ತೀಸ್‌ಗಢದ ಔರ್ದಾ ಗ್ರಾಮದ ಹೆಣ್ಣುಮಕ್ಕಳ ಪಾಲಕರಿಗೆ ಈ ಸಮಸ್ಯೆಯೇ ಇಲ್ಲ. ಯಾಕೆಂದರೆ ಅವರು ತಮ್ಮ ಗ್ರಾಮದವರವನ್ನು ಬಿಟ್ಟು ಹೊರಗಿನವರಿಗೆ ಮಗಳನ್ನು ಮದುವೆ ಮಾಡಿ ಕೊಡುವುದೇ ಇಲ್ಲ!

ಹೌದು, ಔರ್ದಾದಲ್ಲಿ ಅಂತರ್ ಗ್ರಾಮ ವಿವಾಹ ನಿಷಿದ್ಧವೆಂಬ ಅಲಿಖಿತ ನಿಯಮವಿದೆ. ಇಲ್ಲಿನ ಹೆಣ್ಣುಮಕ್ಕಳು ತಮ್ಮ ಗ್ರಾಮದವರನ್ನು ಮಾತ್ರವೇ ವಿವಾಹವಾಗುತ್ತಾರೆ. ಚಿಕ್ಕಂದಿನಿಂದಲೇ ಪರಿಚಯ ಇರುವವರ ಜತೆ, ಎಲ್ಲ ವಿವರ ಗೊತ್ತಿರುವ ಕುಟುಂಬದವರೊಂದಿಗೇ ವಿವಾಹ ಸಂಬಂಧ ಮಾಡಿಕೊಳ್ಳುವುದು ಇಲ್ಲಿನವರ ಸಂಪ್ರದಾಯ.

ADVERTISEMENT

ರಾಯಗಢದಿಂಧ ಸುಮಾರು 300 ಕಿ.ಮೀ. ದೂರದಲ್ಲಿರುವ ಔರ್ದಾ ಗ್ರಾಮದಲ್ಲಿ 50ಕ್ಕೂ ಹೆಚ್ಚು ಯುವತಿಯರನ್ನು ಅದೇ ಗ್ರಾಮದ ಯುವಕರಿಗೇ ವಿವಾಹ ಮಾಡಿಕೊಡಲಾಗಿದೆ. ಹೀಗಾಗಿ ಈ ಗ್ರಾಮದಲ್ಲಿರುವ ಬಹುತೇಕ ಎಲ್ಲ ಕುಟುಂಬಗಳೂ ಪರಸ್ಪರ ಸಂಬಂಧಿಕರದ್ದೇ ಆಗಿವೆ. ಸುಮಾರು 3,000 ಜನಸಂಖ್ಯೆ ಹೊಂದಿರುವ ಔರ್ದಾ ಗ್ರಾಮದಲ್ಲಿ ಹಿಂದುಳಿದ ಸವ್ ಸಮುದಾಯಕ್ಕೆ ಸೇರಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಇವರು ಅಂತರ್‌ ಜಾತಿ ವಿವಾಹಕ್ಕೂ ಒಲವು ತೋರುವುದಿಲ್ಲ.

‘ಇಲ್ಲೇ ಹುಟ್ಟಿ ಬೆಳೆದ, ಜತೆಯಾಗಿ ಆಡಿದ, ಇಲ್ಲೇ ಜೀವನ ರೂಪಿಸಿದ ಗಂಡು–ಹೆಣ್ಣುಗಳು ಕೊನೆಗೆ ದಂಪತಿಯಾಗಿ ಇಲ್ಲೇ ಜೀವನ ನಡೆಸುತ್ತಾರೆ’ ಎಂದು ಗ್ರಾಮದ ಉಪ ಸರ್‌ಪಂಚ್ ಕೌಸಲ್ಯಾ ಸವ್ ತಿಳಿಸಿದ್ದಾರೆ. ಕೌಸಲ್ಯಾ ಕೂಡ ಅದೇ ಗ್ರಾಮದ ವ್ಯಕ್ತಿ ಜತೆ 3 ದಶಕಗಳ ಹಿಂದೆ ವಿವಾಹವಾಗಿದ್ದವರು.

‘ಪ್ರಯೋಜನವೇ ಹೆಚ್ಚು’: ಗ್ರಾಮದೊಳಗಡೆಯೇ ವಿವಾಹ ಸಂಬಂಧ ಏರ್ಪಡಿಸುವ ಪದ್ಧತಿ ಹೇಗೆ ಅಸ್ತಿತ್ವಕ್ಕೆ ಬಂತು ಎಂಬ ಪ್ರಶ್ನೆಗೆ ಗ್ರಾಮಸ್ಥರು ನೀಡುವ ಉತ್ತರ ಸರಳವಾದದ್ದು.

‘ಗ್ರಾಮದ ಯುವಕರಿಗೆ ಮಾತ್ರ ಮಗಳನ್ನು ವಿವಾಹ ಮಾಡಿಕೊಡಬೇಕೆಂದು ಯಾರೂ ಬಲವಂತ ಮಾಡುತ್ತಿಲ್ಲ. ಸ್ವ ಇಚ್ಛೆಯಿಂದಲೇ ಈ ಪದ್ಧತಿ ಜಾರಿಯಲ್ಲಿದೆ. ಗುರುತು–ಪರಿಚಯವಿಲ್ಲದ ವ್ಯಕ್ತಿಗಳ ಮಧ್ಯೆ ವಿವಾಹ ಸಂಬಂಧ ಮಾಡಿಕೊಳ್ಳುವುದಕ್ಕಿಂತ ಪರಸ್ಪರ ತಿಳಿದ ಕುಟುಂಬಗಳ ಮಧ್ಯೆಯೇ ಮಾಡಿಕೊಂಡರೆ ಹೊಂದಾಣಿಕೆಯೂ ಹೆಚ್ಚು. ನೆಮ್ಮದಿಯ ಜೀವನ ನಡೆಸಬಹುದು. ಬೇರೆ ಗ್ರಾಮದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುವ, ಅವರ ಹಿನ್ನೆಲೆ ಬಗ್ಗೆ ವಿಮರ್ಶೆ ಮಾಡುವ ಸಂಕಷ್ಟವೂ ತಪ್ಪುತ್ತದೆ. ವಿವಾಹವಾದ ನಂತರ ಯುವತಿಯರು ತಮ್ಮದೇ ಗ್ರಾಮದಲ್ಲಿ ನೆಲೆಸುವುದರಿಂದ ಆತ್ಮೀಯರನ್ನು, ಒಡಹುಟ್ಟಿದವರನ್ನು ಬಿಟ್ಟು ತೆರಳುವ ಪ್ರಮೇಯವೂ ಇರುವುದಿಲ್ಲ’ ಎಂಬ ಅಭಿಪ್ರಾಯ ಔರ್ದಾ ಗ್ರಾಮಸ್ಥರದ್ದು.

ವಿವಾಹವ ಸಂಬಂಧವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಪದ್ಧತಿ ನೆರವಾಗಿದೆ ಎನ್ನುತ್ತಾರೆ ಔರ್ದಾದ ಸಾಮಾಜಿಕ ಕಾರ್ಯಕರ್ತ ಪ್ರಮೋದ್ ಕುಮಾರ್ ಸವ್. ಇದೊಂದು ಧನಾತ್ಮಕ ಬೆಳವಣಿಗೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.