ADVERTISEMENT

ಹೊಸ ಮುದ್ರಣ ಮಾಧ್ಯಮ ಮಸೂದೆಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ):  ಭಯೋತ್ಪಾದಕ ಹಾಗೂ ನಿಯಮಬಾಹಿರ ಚಟುವಟಿಕೆಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿ ಯಾವುದೇ ಪ್ರಕಟಣೆ ಹೊರತರುವುದಕ್ಕೆ ನಿಷೇಧ ಹೇರುವ ಜತೆಗೆ ದಿನಪತ್ರಿಕೆಗಳ ಇಂಟರ್‌ನೆಟ್ ಆವೃತ್ತಿಗಳನ್ನು ಗಮನದಲ್ಲಿರಿಸಿಕೊಂಡ ಹೊಸ ಮುದ್ರಣ ಮಾಧ್ಯಮ ಮಸೂದೆಗೆ ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಉದ್ದೇಶಿತ ಮಸೂದೆಗೆ ಒಪ್ಪಿಗೆ ನೀಡುವ ಮೂಲಕ ಬಹು ಹಿಂದೆ ಜಾರಿಗೊಂಡಿದ್ದ 1867ರ ಪ್ರೆಸ್ ಅಂಡ್ ರಿಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್‌ಗೆ ತಿದ್ದುಪಡಿ ತರಲು ನಿರ್ಧರಿಸಲಾಯಿತು.

ಭಯೋತ್ಪಾದಕ ಹಾಗೂ ನಿಯಮಬಾಹಿರ ಚಟುವಟಿಕೆಗಳಲ್ಲಿ ತಪ್ಪಿತಸ್ಥನಾದ ವ್ಯಕ್ತಿ ಹೊರಡಿಸುವ ಪ್ರಕಟಣೆ ಮೇಲೆ ನಿಷೇಧ ಹೇರಲು ಈ ಮುಂಚೆ ಸಾಧ್ಯವಿರಲಿಲ್ಲ ಎಂದು ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ. ಶಿರೋನಾಮೆ ಪರಿಶೀಲನೆ, ದಿನಪತ್ರಿಕೆಗಳ ಇಂಟರ್‌ನೆಟ್ ಆವೃತ್ತಿ ಒಳಗೊಂಡಂತೆ ಪ್ರಕಾಶನದ ವ್ಯಾಖ್ಯೆ ಮತ್ತಿತರರ ಅಂಶಗಳ ಕುರಿತು ಹೊಸ ಮಸೂದೆ ಗಮನ ಹರಿಸಲಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರಕಾಶನ ಉದ್ಯಮ ಅಗಾಧವಾಗಿ ಬೆಳೆದು 70,000 ಪ್ರಕಟಣೆಗಳು ಹೊರಬರುತ್ತಿರುವುದನ್ನು ದೃಷ್ಟಿಯಲ್ಲಿರಿಸಿಕೊಂಡು ಹೊಸ ಮಸೂದೆ ಸಿದ್ಧಪಡಿಸಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಕಾರ್ಯದಶಿ ರಘು ಮೆನನ್ ಹೇಳಿದ್ದಾರೆ. ಉದ್ದೇಶಿತ ಮಸೂದೆ ಹೆಚ್ಚು ಜನಸ್ನೇಹಿಯಾಗಿದೆ. ಶಿರೋನಾಮೆ ನಿಗದಿಯಾದ ಒಂದು ವರ್ಷದೊಳಗೆ ಪ್ರಕಟಣೆ ಹೊರತರುವುದನ್ನು ಹಾಗೂ ಪ್ರತಿವರ್ಷ ಲೆಕ್ಕಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ, ಫ್ಯಾಸಿಮಿಲಿ ಆವೃತ್ತಿ, ವೈಜ್ಞಾನಿಕ, ತಾಂತ್ರಿಕ ಹಾಗೂ ಇನ್ನಿತರ ವಿಶೇಷ ನಿಯತಕಾಲಿಕಗಳ ಪ್ರಕಾಶನದ ಸಂಬಂಧ ಈ ಮುಂಚೆ ಹಲವಾರು ಮಾಗದರ್ಶಿ ಸೂತ್ರಗಳಿದ್ದವು. ಎಫ್‌ಡಿಐ ಹಾಗೂ ವಿದೇಶಿ ಪ್ರಕಾಶನದ ಮೇಲೆ ವಿಧಿಸಲಾಗಿದ್ದ ಮಿತಿ ಮುಂಚಿನಂತೆಯೇ ಮುಂದುವರಿಯುತ್ತದೆ. ಆದರೆ ಇದೀಗ ಈ ಮಾರ್ಗದರ್ಶಿಸೂತ್ರಗಳನ್ನು ಶಾಸನಬದ್ಧಗೊಳಿಸಿ ಹೆಚ್ಚಿನ ಬಲ ತುಂಬಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.