ADVERTISEMENT

ಹೊಸ ರೈಲು ಮಾರ್ಗ: ಭೂಸ್ವಾಧೀನ ಪೂರ್ಣವಾಗದೆ ಕಾಮಗಾರಿ ಇಲ್ಲ

ರೈಲ್ವೈಯಿಂದ ಹೊಸ ನೀತಿ: ಜಮೀನು ಅಲಭ್ಯತೆಯಿಂದ ಯೋಜನೆ ವಿಳಂಬ ತಪ್ಪಿಸುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 20:03 IST
Last Updated 5 ನವೆಂಬರ್ 2017, 20:03 IST
ಹೊಸ ರೈಲು ಮಾರ್ಗ: ಭೂಸ್ವಾಧೀನ ಪೂರ್ಣವಾಗದೆ ಕಾಮಗಾರಿ ಇಲ್ಲ
ಹೊಸ ರೈಲು ಮಾರ್ಗ: ಭೂಸ್ವಾಧೀನ ಪೂರ್ಣವಾಗದೆ ಕಾಮಗಾರಿ ಇಲ್ಲ   

ನವದೆಹಲಿ (ಪಿಟಿಐ): ಹೊಸ ರೈಲು ಮಾರ್ಗಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆ ಯೋಜನೆಯ ಕಾಮಗಾರಿ ಆರಂಭಿಸುವುದಿಲ್ಲ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಜಮೀನು ಲಭ್ಯವಿಲ್ಲ ಎಂಬ ಕಾರಣಕ್ಕೆ ಯಾವುದೇ ಯೋಜನೆ ಅರ್ಧದಲ್ಲಿ ನಿಲ್ಲಬಾರದು ಎಂಬ ಉದ್ದೇಶದಿಂದ ರೈಲ್ವೆ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಅದು ಹೊಸ ನೀತಿಯನ್ನು ಪ್ರಕಟಿಸಿದೆ.

ನೂತನ ನೀತಿಯ ಅಡಿಯಲ್ಲಿ, ಹೊಸ ರೈಲು ಮಾರ್ಗ ಹಾದುಹೋಗಲಿರುವ ಜಮೀನು ರೈಲ್ವೆಗೆ ಹಸ್ತಾಂತರ ಆಗದಿದ್ದರೆ ಅಥವಾ ನಿರ್ದಿಷ್ಟ ಸಮಯದೊಳಗೆ ಜಮೀನನ್ನು ರೈಲ್ವೆಗೆ ನೀಡುವ ಖಚಿತ ಭರವಸೆಯನ್ನು ರಾಜ್ಯ ಸರ್ಕಾರಗಳು ಲಿಖಿತವಾಗಿ ನೀಡದೇ ಹೋದರೆ ಕಾಮಗಾರಿ ಟೆಂಡರ್‌ ಕರೆಯುವಂತಿಲ್ಲ ಅಥವಾ ಯೋಜನೆಯ ಕೆಲಸ ಆರಂಭಿಸುವಂತಿಲ್ಲ.

ADVERTISEMENT

ಸದ್ಯ ಹೊಸ ರೈಲು ಮಾರ್ಗದ ಯೋಜನೆ ಆರಂಭಕ್ಕೆ ಶೇ 70ರಷ್ಟು ಜಮೀನು ಸ್ವಾಧೀನ ಮಾಡಿದರೆ ಸಾಕು. ಇದರಿಂದಾಗಿ, ಅರ್ಧ ಕೆಲಸ ಮುಗಿದ ನಂತರ ಜಮೀನಿನ ಅಲಭ್ಯತೆಯಿಂದ ಅಥವಾ ಯೋಜನೆಗಾಗಿ ಗುರುತಿಸಲಾಗಿರುವ ಜಮೀನಿನ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ ಕಾರಣಕ್ಕೆ ಯೋಜನೆಗಳು ಅರ್ಧದಲ್ಲೇ ನಿಂತಿರುವ ಉದಾಹರಣೆಗಳಿವೆ.

‘ಹೊಸ ರೈಲು ಮಾರ್ಗ ಬೇಕಾದರೆ ರೈಲ್ವೆಗೆ ಜಮೀನು ಲಭ್ಯವಿರುವಂತೆ ಮಾಡುವ ಜವಾಬ್ದಾರಿಯನ್ನು ಹೊಸ ನೀತಿಯು ರಾಜ್ಯಗಳಿಗೆ ನೀಡುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

2006ರಲ್ಲಿ ಮಂಜೂರಾಗಿರುವ ಆಂಧ್ರಪ್ರದೇಶದ ತಿಂಡಿವನಂ ಮತ್ತು ನಗರಿ ನಡುವಣ 179.2 ಕಿ.ಮೀ ಹಾಗೂ ಮೊರಪ್ಪುರ್‌ ಮತ್ತು ಧರ್ಮಪುರಿ ನಡುವಣ 36 ಕಿ.ಮೀ ಉದ್ದದ ರೈಲು ಮಾರ್ಗಗಳ ನಿರ್ಮಾಣ ಯೋಜನೆಗಳನ್ನು ಅವರು ಉದಾಹರಿಸಿದ್ದಾರೆ.

ಜಮೀನು ಲಭ್ಯವಿರದ ಕಾರಣಕ್ಕೆ ₹134 ಕೋಟಿ ವೆಚ್ಚದ ಈ ಯೋಜನೆಗಳು ಕುಂಟುತ್ತಾ ಸಾಗಿವೆ. ಇಂತಹ ವಿಳಂಬದಿಂದಾಗಿ ಪ್ರತಿ ವರ್ಷ ಯೋಜನಾ ವೆಚ್ಚದಲ್ಲಿ ಶೇ 10ರಷ್ಟು ಹೆಚ್ಚಳವಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಸಡಿಲಿಕೆ:  ಈ ನೀತಿಯು ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಕೆಲವು ವಿನಾಯಿತಿಗಳನ್ನು ನೀಡುವುದರ ಜೊತೆಗೆ ಕೆಲವು ವಿವೇಚನಾಧಿಕಾರಗಳನ್ನೂ ನೀಡಿದೆ.

‘ನಿಗದಿತ ಅವಧಿಯೊಳಗೆ ಭೂಸ್ವಾಧೀನ ಆಗಬಹುದು ಎಂಬ ಖಾತರಿ ಇದ್ದರೆ, ಪ್ರಧಾನ ವ್ಯವಸ್ಥಾಪಕರು ಟೆಂಡರ್‌ ಕರೆಯಬಹುದು. ಈ ಸಂಬಂಧ, ರಾಜ್ಯ ಸರ್ಕಾರ ನೀಡುವ ಲಿಖಿತ ಭರವಸೆಯನ್ನು ಅವರು ಮಾನ್ಯ ಮಾಡಬಹುದು’ ಎಂದು ಅದು ವಿವರಿಸಿದೆ.‘ದೊಡ್ಡ ಯೋಜನೆಗಳನ್ನು ಹಂತಗಳಾಗಿ ಪ್ರಧಾನ ವ್ಯವಸ್ಥಾಪಕರು ವಿಭಾಗಿಸಬಹುದು.

ಆದರೆ, ಪೂರ್ಣಗೊಂಡ ಬಳಿಕ ಪ್ರತಿ ಹಂತವೂ ರೈಲ್ವೆಗೆ ವರಮಾನ ತರುತ್ತದೆ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಬೇಕು’ ಎಂದು ಹೊಸ ನೀತಿಯಲ್ಲಿ ಹೇಳಲಾಗಿದೆ. ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹೊಸ ಯೋಜನೆಗಳಿಗೆ ಮತ್ತು ಇದುವರೆಗೂ ಟೆಂಡರ್‌ಗಳನ್ನು ಅಂತಿಮಗೊಳಿಸದ ಹಳೆಯ ಯೋಜನೆಗಳಿಗೂ ಈ ನೀತಿ ಅನ್ವಯವಾಗಲಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.

ಆಧಾರ್‌ ಆಧರಿತ ಹಾಜರಾತಿ ವ್ಯವಸ್ಥೆ

ನವದೆಹಲಿ: ತಡವಾಗಿ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿ ವಿರುದ್ಧ ನಿಗಾ ಇಡಲು ಮುಂದಾಗಿರುವ ರೈಲ್ವೆ ಸಚಿವಾಲಯ, ಮುಂದಿನ ವರ್ಷದ ಜನವರಿ 31ರ ಒಳಗಾಗಿ ತನ್ನ ಎಲ್ಲ ವಲಯ, ವಿಭಾಗಗಳಲ್ಲಿ ಆಧಾರ್‌ ಆಧರಿತ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಹೇಳಿದೆ.

ಈ ಸಂಬಂಧ, ಸಚಿವಾಲಯವು ನವೆಂಬರ್‌ 3ರಂದು ತನ್ನ ಎಲ್ಲ ವಲಯಗಳಿಗೂ ಆದೇಶ ಕಳುಹಿಸಿದೆ.

ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಮೊದಲಿಗೆ ಎಲ್ಲ ವಿಭಾಗಗಳ ಮತ್ತು ವಲಯಗಳ ಕಚೇರಿಗಳು, ಕೋಲ್ಕತ್ತ ಮೆಟ್ರೊ ರೈಲು, ರೈಲ್ವೆ ದುರಸ್ತಿ ಘಟಕ (ವರ್ಕ್‌ಶಾಪ್‌), ಕಾರ್ಖಾನೆಗಳು ಮತ್ತು ತಯಾರಿಕಾ ಘಟಕಗಳಲ್ಲಿ ನವೆಂಬರ್‌ 30 ಒಳಗಾಗಿ ಜಾರಿಗೆ ತರಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.