ADVERTISEMENT

ಹೋರಾಟ ತೀವ್ರಗೊಳಿಸಿದ ಬಿಜೆಪಿ

ವೀರಭದ್ರ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ನವದೆಹಲಿ (ಪಿಟಿಐ): ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ವಿರುದ್ಧ ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್‌ ಜೇಟ್ಲಿ ಅವರು ಪ್ರಧಾನ ಮಂತ್ರಿ ಡಾ. ಮನಮೋಹನ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ. ಅದರ ಬೆನ್ನಹಿಂದೆಯೇ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ವೀರಭದ್ರ ಸಿಂಗ್‌ ದಂಪತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಚುನಾವಣೆ ಕಾಲಕ್ಕೆ ವೀರಭದ್ರ ಸಿಂಗ್‌ ಹಾಗೂ ಅವರ ಪತ್ನಿ, ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರತಿಭಾ ಸಿಂಗ್‌ ಅವರುಗಳು ಆದಾಯದ ಬಗ್ಗೆ ತಪ್ಪು ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂದು ಠಾಕೂರ್‌ ಆರೋಪಿಸಿದ್ದಾರೆ.

‘ವೀರಭದ್ರ ಸಿಂಗ್‌ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಸ್ಥಾನಕ್ಕೆ ಬೇರೆಯವರನ್ನು ಕಾಂಗ್ರೆಸ್‌ ನೇಮಕ ಮಾಡಬೇಕು. ಸಿಂಗ್‌ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮಾಡಲಾಗುತ್ತಿರುವ ಐದನೇ ಆರೋಪ ಇದಾಗಿದೆ’ ಎಂದು  ದೂರಿನಲ್ಲಿ ತಿಳಿಸಲಾಗಿದೆ.

ಅಂಬಿಕಾ ಭೇಟಿ ಮಾಡಿದ ವೀರಭದ್ರ
ಈ ನಡುವೆ ಹಿಮಾಚಲ ಪ್ರದೇಶ ಉಸ್ತುವಾರಿ ಹೊತ್ತಿ­ರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ ಅವ­ರನ್ನು ಬುಧವಾರ ಭೇಟಿ ಮಾಡಿದ ವೀರಭದ್ರ ಸಿಂಗ್‌, ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಸಿಂಗ್‌ ಈ ಹಿಂದೆ ಕೇಂದ್ರ ಉಕ್ಕು ಸಚಿವರಾಗಿದ್ದ ಅವಧಿ-­ಯಲ್ಲಿ ಖಾಸಗಿ ಉಕ್ಕು ಕಂಪೆನಿಯ ವಿಸ್ತರಣೆಗಾಗಿ ₨ 2 ಕೋಟಿಗೂ ಹೆಚ್ಚು ಲಂಚ ಪಡೆದಿದ್ದಾರೆ ಎಂದು ಜೇಟ್ಲಿ ಆರೋ­­ಪಿ­ಸಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ತಂದಿದೆ.

ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಸಿಂಗ್‌, ಈ ಸಂಬಂಧ ಕೆಲ ದಾಖಲೆಗಳನ್ನು ಸೋನಿ ಅವರಿಗೆ ತೋರಿಸಿ­ದರು ಎಂದು ಹೇಳಲಾಗಿದೆ. ಸಿಂಗ್‌ ಅವರ ಪತ್ನಿ ಪ್ರತಿಭಾ ಅವರೂ ಈ ಆರೋಪಗಳನ್ನು ಅಲ್ಲಗಳೆದಿದ್ದು, ಈ ಸಂಬಂಧ ನವದೆಹಲಿಯಲ್ಲಿ ಕೆಲ ಕಾಂಗ್ರೆಸ್‌ ಮುಖಂಡರನ್ನು ಭೇಟಿಮಾಡಿ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT