ಮುಂಬೈ (ಪಿಟಿಐ): ಕೆಳಗಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಶಕ್ತಿಮಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಬೇರೆಡೆಗೆ ವರ್ಗಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅಲ್ಲದೇ, ಈ ಅರ್ಜಿ ಕುರಿತು ಸೂಕ್ತ ಮಾಹಿತಿ ನೀಡುವಂತೆ ವಕೀಲರಿಗೆ ತಾಕೀತು ಮಾಡಿದೆ.
‘ಸೆಷನ್ಸ್ ನ್ಯಾಯಾಲಯದಲ್ಲಿಯೇ ಈ ಪ್ರಕರಣ ತನಿಖೆಯಾಗಲಿ. ಇದನ್ನು ನಾವು ತಡೆಯುವುದಿಲ್ಲ’ ಎಂದು ಹೈಕೋರ್ಟ್ನ ರಜಾ ಕಾಲದ
ಪೀಠದ ನಾಯಮೂರ್ತಿ ಜಿ.ಎಸ್.ಪಟೇಲ್ ಹೇಳಿದರು.
ತನಿಖೆ ನಡೆಸುತ್ತಿರುವ ನ್ಯಾಯಾಧೀಶರು ಪ್ರತಿವಾದಿಗಳ ಸಾಕ್ಷ್ಯಾಧಾರಗಳನ್ನು ಸರಿಯಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು.
ಶಕ್ತಿಮಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಹಮ್ಮದ್ ಅಶ್ಫಾಕ್ ಶೇಖ್, ಸಲೀಂ ಅನ್ಸಾರಿ ಮತ್ತು ವಿಜಯ್ ಜಾಧವ್ ಅವರು ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾಹ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನೇ ಅರ್ಜಿಯನ್ನಾಗಿ ಪರಿಗಣಿಸಿ ವಿಚಾರಣೆ ನಡೆಸಿ ಎಂದು ಮುಖ್ಯ ನ್ಯಾಯಮೂರ್ತಿಗಳು ರಜಾ ಅವಧಿಯ ಪೀಠಕ್ಕೆ ವರ್ಗಾಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.