ADVERTISEMENT

‘ಕೈ’ಹಿಡಿಯದ ದೊಡ್ಡ ರಾಜ್ಯಗಳು

ಕಳೆಗುಂದಿದ ಸೋನಿಯಾ–ರಾಹುಲ್‌ ನಾಯಕತ್ವ

ಸಾಗರ್ ಕುಲಕರ್ಣಿ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ‘ಉಪಾಂತ್ಯ’ ಎಂದೇ ಭಾವಿಸ­ಲಾದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ­ಗಳಿಂದ ಕಂಗೆಟ್ಟಿರುವ ಸೋನಿಯಾ–ರಾಹುಲ್‌ ನೇತೃತ್ವದ ಕಾಂಗ್ರೆಸ್‌ ನಾಯಕತ್ವ ಇದೀಗ ಕಳೆಗುಂದಿದ್ದು, ಬಹುತೇಕ ದೊಡ್ಡ ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕನಸಾಗೇ ಉಳಿಯುವಂತಾಗಿದೆ.

ಲೋಕಸಭೆ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ಬಂದಿರುವ ಈ ಫಲಿತಾಂಶ ನಿಜಕ್ಕೂ ಕಾಂಗ್ರೆಸನ್ನು ಸಂಕಷ್ಟದ ಸ್ಥಿತಿಗೆ ನೂಕಿದೆ. ರಾಜಸ್ತಾನದಲ್ಲಿ ಅಧಿಕಾರ ಉಳಿಸಿಕೊಳ್ಳುವ, ಮಧ್ಯಪ್ರದೇಶ ಹಾಗೂ ಛತ್ತೀಸಗಡದಲ್ಲಿ ಅಧಿಕಾರಕ್ಕೆ ಬರುವ ದಿಸೆಯಲ್ಲಿ ನಾಯಕರು ವಹಿಸಿದ ಶ್ರಮ ವ್ಯರ್ಥವಾಗಿದ್ದು ಪಕ್ಷದ ನಾಯಕತ್ವಕ್ಕೆ ಇದು ದೊಡ್ಡ ಸವಾಲು ಎನಿಸಿದೆ.

ದೊಡ್ಡ ರಾಜ್ಯ ರಾಜಸ್ತಾನದಲ್ಲೂ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ.  ಹಾಗಾಗಿ ಕರ್ನಾಟಕ, ಕೇರಳ ಹಾಗೂ ಅಸ್ಸಾಂನಂತಹ ದೊಡ್ಡ ರಾಜ್ಯಗಳಲ್ಲಿ ಮಾತ್ರ ಪಕ್ಷ ಈಗ ಸ್ವಂತ ಬಲದಲ್ಲಿ ಅಧಿಕಾರದಲ್ಲಿದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜತೆ, ಜಾರ್ಖಂಡ್‌ನಲ್ಲಿ ಜೆಎಂಎಂ–ಕಾಂಗ್ರೆಸ್‌ ಸರ್ಕಾರವಿದೆ. ಈ ಎಲ್ಲ ರಾಜ್ಯಗಳಿಂದ 124 ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಬಹುದಾಗಿದೆ. ಉತ್ತರಾಖಂಡ, ಹರಿಯಾಣ, ಹಿಮಾ­ಚಲ ಪ್ರದೇಶ ಹಾಗೂ ಈಶಾನ್ಯ ಭಾಗದ ಕೆಲ ಸಣ್ಣ ರಾಜ್ಯಗಳಲ್ಲಿ ಕಾಂಗ್ರೆಸ್‌ ಸ್ವಂತ ಬಲದಲ್ಲಿ ಅಧಿಕಾರದಲ್ಲಿದೆ.

ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳ­ದಂತಹ ದೊಡ್ಡ ರಾಜ್ಯಗಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯ ಎನ್ನಲಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆ, ಆಡಳಿತ ವೈಫಲ್ಯದಂತಹ ವಿಷಯಗಳು ಕಾಂಗ್ರೆಸ್‌  ಪರಾಭವಕ್ಕೆ ಪ್ರಮುಖ ಕಾರಣ ಎಂದು ಸಾಮಾನ್ಯವಾಗಿ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.