ADVERTISEMENT

‘ಗಲಭೆಗೆ ಮುಖ್ಯಮಂತ್ರಿಯೇ ಹೊಣೆ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ರಾಜ್ಯದಲ್ಲಿ ಸಂಭವಿಸುವ ಗಲಭೆಯ ಹೊಣೆಯನ್ನು ಮುಖ್ಯಮಂತ್ರಿ ಹೊರಲೇಬೇಕು ಎಂದು ಎನ್‌ಸಿಪಿ ಅಧ್ಯಕ್ಷ ಮತ್ತು ಕೇಂದ್ರ ಕೃಷಿ ಸಚಿವ ಶರದ್‌ ಪವಾರ್ ಹೇಳಿದ್ದಾರೆ

2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ಜವಾ­ಬ್ದಾರಿ­ಯಿಂದ  ಆಗ ಅಲ್ಲಿ ಮುಖ್ಯ­ಮಂತ್ರಿ ಆಗಿದ್ದವರು ನುಣುಚಿಕೊಳ್ಳಲು ಸಾಧ್ಯ­ವಿಲ್ಲ ಎಂದು ಅವರು ಖಾಸಗಿ ಟಿವಿ ಚಾನೆ­­ಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ನಾನು ರಾಜ್ಯದ ಮುಖ್ಯ ಮಂತ್ರಿ­ಯಾಗಿ­­ದ್ದಾಗ ರಾಜ್ಯದಲ್ಲಿ ಏನೇ ಸಂಭವಿ­ಸಿ­­ದರೂ ಹೊಣೆಗಾರಿಕೆ ಹೊರಬೇಕಾಗು­ತ್ತದೆ, ನನಗೆ ಸಂಬಂಧವಿಲ್ಲ ಎಂದು ಜಾರಿಕೊಳ್ಳಲು ಸಾಧ್ಯವಿಲ್ಲ’ ಎಂದು ಪವಾರ್ ಹೇಳಿ­ದ್ದಾರೆ.

‘ಒಬ್ಬ ಮುಖ್ಯ­ಮಂತ್ರಿಯಾಗಿ, ಗೃಹ ಸಚಿವ­ನಾಗಿ ಅಥವಾ ಒಬ್ಬ ಆಡ­ಳಿ­ತ­ಗಾರನಾಗಿ ಗಲಭೆಯಲ್ಲಿ ನೇರ­ವಾಗಿ ಭಾಗಿಯಾ­ಗದೆ ಇರಬಹುದು. ಆದರೆ ಇಂತಹ ಸಂದರ್ಭ­ದಲ್ಲಿ ಜನರ ಹಿತಾಸಕ್ತಿ ಕಾಪಾಡುವುದು ಮುಖ್ಯ’ ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ತೀರ್ಪನ್ನು ಒಪ್ಪಿ­ಕೊಳ್ಳ­ಬೇಕು ಎಂದು ಹೇಳುವ ಮೂಲಕ ಪವಾರ್‌ ಅವರು  ‘ಕೋಮು ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಮೋದಿ ಅವರನ್ನು ನಿರ್ದೋಷಿ ಎಂದು ತೀರ್ಮಾನಿಸಿರುವುದರಿಂದ ಕೋಮು ಗಲಭೆಗೆ ಮೋದಿ ಕಾರಣರು ಎಂದು ಇನ್ನು ಮುಂದೆ ಹೇಳಲು ಸಾಧ್ಯವಿಲ್ಲ ’ ಎಂಬ ತಮ್ಮ ಮೊದಲಿನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಗುಜರಾತ್‌ ರಾಜ್ಯದಲ್ಲಿ ಆಗಿರುವ ಅಭಿ­ವೃದ್ಧಿ ಕಾರ್ಯಗಳಿಗೆ ಒಬ್ಬ ಮುಖ್ಯ­ಮಂತ್ರಿ ಮಾತ್ರ ಕಾರಣವಲ್ಲ, ಚಿಮಣ್‌­ಭಾಯಿ ಪಟೇಲ್‌್ ಅವರಿಂದ ಹಿಡಿದು ಮೋದಿ ಮುಖ್ಯಮಂತ್ರಿ ಆಗುವರೆಗೆ ಎಲ್ಲಾ ಮುಖ್ಯಮಂತ್ರಿಗಳೂ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಪರೋಕ್ಷವಾಗಿ ಮೋದಿ ಅವರನ್ನು ಟೀಕಿಸಿದರು.
ಮೋದಿ ಜತೆಗೆ ನಿಮ್ಮ ಸಂಬಂಧ ಹೇಗಿದೆ ಎಂದು ಕೇಳಿದಾಗ, ‘ಮೋದಿ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರ ಜತೆ ನಾನು ಉತ್ತಮ  ಸಂಬಂಧ ಹೊಂದಿದ್ದೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.