ADVERTISEMENT

‘ಶಾಂತಿ ಶೋಧನೆ ಭಾರತದ ದೌರ್ಬಲ್ಯವಲ್ಲ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 11:14 IST
Last Updated 14 ಡಿಸೆಂಬರ್ 2013, 11:14 IST

ಡೆಹ್ರಾಡೂನ್ (ಪಿಟಿಐ): ನಮ್ಮದು ಶಾಂತಿ ಪ್ರಿಯ ರಾಷ್ಟ್ರ. ಆದರೆ ನಮ್ಮ ಶಾಂತಿ ಶೋಧನೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು’ ರಕ್ಷಣಾ ಸಚಿವ ಎ ಕೆ ಆಂಟನಿ ಶನಿವಾರ ತಿಳಿಸಿದ್ದಾರೆ.

ಇಂಡಿಯನ್ ಮಿಲಿಟರಿ ಅಕಾಡೆಮಿಯ  ವಿವಿಧ ರಾಷ್ಟ್ರಗಳ ಕೆಡೆಟ್‌ಗಳ ನಿರ್ಗಮನ ಪರೇಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ದೇಶದ ಗಡಿಗಳಲ್ಲಿ ಉದ್ವಿಗ್ನತೆ ಎದುರಾದಾಗ ಭಾರತೀಯ ಸೇನೆ ನಡೆಸಿದ ಹೋರಾಟಕ್ಕೆ ಇತಿಹಾಸ ಸಾಕ್ಷಿಯಾಗಿದೆ.ಕಾಲಕಾಲಕ್ಕೆ ಎದುರಾಗುವ ಸಂಕಷ್ಟಗಳಿಗೆ ಎದೆಗೊಟ್ಟು ಶೌರ್ಯದಿಂದ ಎದುರಿಸುವ ಸಾಮರ್ಥ್ಯಕ್ಕೆ ಭಾರತೀಯ ಯೋಧರು ಹೆಸರುವಾಸಿ’ ಎಂದು ಆಂಟನಿ ನುಡಿದರು.

ADVERTISEMENT

ಪ್ರಸಕ್ತ ವರ್ಷದ ಜೂನ್‌ ತಿಂಗಳಲ್ಲಿ ಉತ್ತರಾಖಂಡದಲ್ಲಿ ನಡೆದ ನೈಸರ್ಗಿಕ ವಿಕೋಪದ ವೇಳೆ ನಡೆದ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ತೋರಿದ ಸಾಹಸವನ್ನು ದೇಶ ಎಂದಿಗೂ ಮರೆಯದು ಎಂದು ಶ್ಲಾಘಿಸಿದ ಆಂಟನಿ, ‘ರಕ್ಷಣಾ ಕಾರ್ಯಾಚರಣೆ ವೇಳೆ ಸಶಸ್ತ್ರ ಪಡೆಗಳು ಮಾಡಿದ ತ್ಯಾಗದಿಂದ ಪಾಠ ಕಲಿಯುವಂತೆ ಕೆಡೆಟ್‌ಗಳಿಗೆ ಕರೆ ನೀಡಿದರು.

‘ನೀವು ತೊಟ್ಟಿರುವುದು ಕೇವಲ ಸಮವಸ್ತ್ರವಲ್ಲ. ದೇಶದ ಸುರಕ್ಷತೆ ಹಾಗೂ ಕಲ್ಯಾಣಕ್ಕೆ ಮೊದಲು  ಆದ್ಯತೆ ನೀಡುವ ಜೀವನ ಕ್ರಮ ಎಂಬುದನ್ನು ಮರೆಯದಿರಿ’ ಎಂದರು.

ಅಲ್ಲದೇ, ವೃತ್ತಿ ಜೀವನದಲ್ಲಿ ಎದುರಾಗಬಹುದಾದ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಸವಾಲುಗಳನ್ನು ನಿಭಾಯಿಸಲು ಸಿದ್ಧವಾಗಿರುವಂತೆ ಕರೆ ನೀಡಿದರು.

ನೇಪಾಳ, ಭೂತಾನ್, ಅಫ್ಘಾನಿಸ್ತಾನ್, ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್ ಸೇರಿದಂತೆ 71 ಸೌಹಾರ್ದ ರಾಷ್ಟ್ರಗಳ 688 ಕೆಡೆಟ್‌ಗಳು, ಕ್ರಮವಾಗಿ ತಮ್ಮ ರಾಷ್ಟ್ರಗಳ ಸೇನೆ ಸೇರಲು ಶ್ರೇಷ್ಠ ಸಂಸ್ಥೆಯಲ್ಲಿ ಉತ್ತೀರ್ಣರಾಗಿ ಶನಿವಾರ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.