ನವದೆಹಲಿ (ಪಿಟಿಐ): ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಆಗಸ್ಟ್–ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ₹45 ಸಾವಿರ ಕೋಟಿ ವೇತನ ಬಾಕಿ ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರಿ ಪ್ರಮಾಣದ ಹಣ ನೌಕರರು ಮತ್ತು ಪಿಂಚಣಿದಾರರ ಕೈಸೇರಲಿದ್ದು ಇದರಿಂದಾಗಿ ಹಬ್ಬಕ್ಕೆ ಮುನ್ನ ವಾಹನ, ಗೃಹೋಪಯೋಗಿ ವಸ್ತುಗಳ ಖರೀದಿ ಭರಾಟೆ ಹೆಚ್ಚಲಿದೆ ಎಂದು ಟಾಟಾ ನೀತಿ ನಿರ್ವಹಣೆ ಸಮೂಹದ ವರದಿ ಹೇಳಿದೆ.
ಯಾರು ಏನು ಮಾಡುವರು?: ಹಣ ಕೈಸೇರಿದ ಬಳಿಕ 30 ಲಕ್ಷ ಕುಟುಂಬಗಳು ದ್ವಿಚಕ್ರ ವಾಹನ, ದುಬಾರಿ ಸ್ಮಾರ್ಟ್‌ಫೋನ್, ಗೃಹ ಬಳಕೆ ಮತ್ತು ಅಲಂಕಾರಿಕ ವಸ್ತುಗಳನ್ನು ಖರೀದಿಸುವ ನಿರೀಕ್ಷೆ ಇದೆ. ಅದೇ ರೀತಿ 8.5 ಲಕ್ಷ ನೌಕರರು ಕುಟುಂಬ ಸಮೇತ ವಿದೇಶಿ ಪ್ರವಾಸ ಹೊರಡುವ ಯೋಜನೆ ಸಿದ್ಧಪಡಿಸಿಟ್ಟುಕೊಂಡಿದ್ದಾರೆ.
4.5 ಲಕ್ಷ ಜನರು ಕಾರು ಖರೀದಿ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ವರದಿ ಅಂದಾಜಿಸಿದೆ. ಜನವರಿ –ಫೆಬ್ರುವರಿಯಲ್ಲಿ ಹಣಕಾಸು ಸಚಿವಾಲಯ ಸಮಿತಿ ವರದಿ ಸಲ್ಲಿಸಿದ ಬಳಿಕ ಎರಡನೇ ಕಂತಿನಲ್ಲಿ ₹34 ಸಾವಿರ ಕೋಟಿ ಹಣ ಬಿಡುಗಡೆಯಾಗಲಿದೆ. ಮೊದಲ ಕಂತಿನ ₹45 ಸಾವಿರ ಕೋಟಿ ಪೈಕಿ ಶೇ 40ರಷ್ಟು ಹಣ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದ ಪಾಲಾಗಲಿದೆ. ಬೆಂಗಳೂರು, ಅಹಮದಾಬಾದ್ ಮತ್ತು ಪುಣೆಯಂತಹ ದೊಡ್ಡ ನಗರಗಳು ಲಖನೌ, ಅಲಹಾಬಾದ್, ಡೆಹ್ರಾಡೂನ್, ಜಬಲಪುರ ಮತ್ತು ನಾಗಪುರದಂತಹ ಚಿಕ್ಕ ನಗರಗಳಿಗಿಂತ ಕಡಿಮೆ ಪಾಲು ಪಡೆಯಲಿವೆ.
ಕೇಂದ್ರ ನೌಕರರ ಪಿಂಚಣಿ ಹೆಚ್ಚಳ: ನಿವೃತ್ತ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 2016ಕ್ಕಿಂತ ಮೊದಲು ನಿವೃತ್ತರಾದ ನೌಕರರಿಗೂ 7ನೇ ವೇತನ ಆಯೋಗದ ಪ್ರಯೋಜನ ಒದಗಿಸುವುದಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.