ADVERTISEMENT

ಸಾಕ್ಷರತಾ ದರ ಶೇ 1 ಹೆಚ್ಚಳ, ಮಹಿಳಾ ಮತದಾರರ ಮತದಾನ ಶೇ 25 ಏರಿಕೆ: ಎಸ್‌ಬಿಐ ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2025, 5:16 IST
Last Updated 13 ಜನವರಿ 2025, 5:16 IST
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿರುವ ಮಹಿಳಾ ಮತದಾರರು
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿರುವ ಮಹಿಳಾ ಮತದಾರರು   

ನವದೆಹಲಿ: ದೇಶದ ಸಾಕ್ಷರತೆಯ ಪ್ರಮಾಣದಲ್ಲಿ ಶೇ 1 ರಷ್ಟು ಹೆಚ್ಚಳವಾಗಿದ್ದು, ಈ ಹೆಚ್ಚಳವು ಮಹಿಳಾ ಮತದಾರರ ಮತದಾನದ ಪ್ರಮಾಣದಲ್ಲಿ ಶೇಕಡ 25ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿ ಹೇಳಿದೆ.

ದೇಶದಲ್ಲಿನ ಸಾಕ್ಷರತೆ ಮತ್ತು ಮಹಿಳಾ ಮತದಾರರ ನಡುವಿನ ಮಹತ್ವದ ಸಂಬಂಧವನ್ನು ವರದಿ ಎತ್ತಿ ತೋರಿಸಿದೆ. ಇದರರ್ಥ 2019ಕ್ಕೆ ಹೋಲಿಸಿದರೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ 1.8 ಕೋಟಿ ಹೆಚ್ಚುವರಿ ಮಹಿಳಾ ಮತದಾರರು ಮತದಾನ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ವರದಿಯು ಮಹಿಳಾ ಮತದಾರರನ್ನು ಪ್ರೇರೇಪಿಸಿದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಸಾಕ್ಷರತೆ, ಉದ್ಯೋಗ ಮತ್ತು ಮನೆ ಮಾಲೀಕತ್ವವು ಅವುಗಳಲ್ಲಿ ಪ್ರಮುಖವಾಗಿವೆ.

ADVERTISEMENT

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಂತಹ ಉದ್ಯೋಗ ಯೋಜನೆಗಳು ನಿರ್ಣಾಯಕ ಪಾತ್ರವನ್ನು ವಹಿಸಿದ್ದು, 36 ಲಕ್ಷ ಹೆಚ್ಚುವರಿ ಮಹಿಳಾ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಲು ಪ್ರೇರೇಪಿಸಿವೆ ಎಂದು ಅದು ಹೇಳಿದೆ.

ಮಹಿಳೆಯರಿಗೆ ಒದಗಿಸಲಾದ ನೈರ್ಮಲ್ಯ ಸೌಲಭ್ಯವು 2024ರ ಚುನಾವಣೆಯಲ್ಲಿ ಸುಮಾರು 21 ಲಕ್ಷ ಮಹಿಳಾ ಮತದಾರರ ಮತದಾನಕ್ಕೆ ಕಾರಣವಾಗಿದೆ. ಇದು ಸಾಮಾಜಿಕ-ರಾಜಕೀಯ ಆದ್ಯತೆಗಳನ್ನು ರೂಪಿಸುವಲ್ಲಿ ಪ್ರಮುಖ ಮಹತ್ವವನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ.

ವಿದ್ಯುಚ್ಛಕ್ತಿ ಮತ್ತು ಸುಧಾರಿತ ಕುಡಿಯುವ ನೀರಿನ ಮೂಲಗಳ ಸೌಲಭ್ಯವು ಮಹಿಳಾ ಮತದಾರರ ಮತದಾನದ ಮೇಲೆ ಧನಾತ್ಮಕ ಪ್ರಭಾವವನ್ನು ತೋರಿಸಿದೆ. ಮನೆ ಮಾಲೀಕತ್ವ, ವಿಶೇಷವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸಿಕ್ಕ ಸೌಲಭ್ಯವು ಮತ್ತೊಂದು ಗಮನಾರ್ಹ ಕೊಡುಗೆಯಾಗಿದೆ. ಹೆಚ್ಚಿದ ಮನೆ ಮಾಲೀಕತ್ವಕ್ಕೆ 20 ಲಕ್ಷ ಹೆಚ್ಚುವರಿ ಮಹಿಳಾ ಮತದಾರರನ್ನು ಲಿಂಕ್ ಮಾಡಬಹುದು ಎಂದು ವರದಿ ತಿಳಿಸಿದೆ.

ಗಮನಾರ್ಹವಾಗಿ, ಈ ಯೋಜನೆಯಡಿಯಲ್ಲಿ ಮಂಜೂರಾದ ಶೇಕಡ 74ರಷ್ಟು ಮನೆಗಳು ಮಹಿಳೆಯರ ಒಡೆತನದಲ್ಲಿವೆ. ಅದು ಮಹಿಳೆಯರ ಸಬಲೀಕರಣದ ಮೇಲೆ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

ಸಾಕ್ಷರತೆ, ಉದ್ಯೋಗ ಮತ್ತು ನೈರ್ಮಲ್ಯದಂತಹ ಅಂಶಗಳು ಎಲ್ಲ ವರ್ಗಗಳ ಮಹಿಳೆಯರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ಇದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.