ಉತ್ತರ ಪ್ರದೇಶದ ಫತೇಹಪುರ ನಗರದಲ್ಲಿರುವ ಪುರಾತನ ಸಮಾಧಿಯ ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ
–ಪಿಟಿಐ ಚಿತ್ರ
ಲಖನೌ: ಉತ್ತರ ಪ್ರದೇಶದ ಫತೇಹಪುರ ನಗರದಲ್ಲಿರುವ 200 ವರ್ಷ ಹಳೆಯದಾದ ಸಮಾಧಿಗೆ ಹಾನಿ ಮಾಡಿದ ಆರೋಪದ ಮೇಲೆ ಬಿಜೆಪಿಯ 10 ನಾಯಕರು ಸೇರಿದಂತೆ 150 ಮಂದಿ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಸಮಾಧಿ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಸಮಾಧಿ ಸ್ಥಳದಲ್ಲಿ ಈ ಮುಂಚೆ ಹಿಂದೂ ದೇಗುಲವಿತ್ತು. ಮುಸ್ಲಿಂ ದೊರೆಯೊಬ್ಬರು ದೇಗುಲವನ್ನು ಧ್ವಂಸಮಾಡಿ ಅದನ್ನು ಸಮಾಧಿಯಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಖಲಾಲ್ ಪಾಲ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸಮಾಧಿ ಇರುವ ಸ್ಥಳಕ್ಕೆ ನುಗ್ಗಿದ್ದರು. ಕಾರ್ಯಕರ್ತರು ಎರಡು ಮಜಾರ್‌ಗಳಿಗೆ (ಮಂದಿರ) ಹಾನಿ ಮಾಡಿ, ಸಮಾಧಿ ಮೇಲೆ ಕೇಸರಿ ಧ್ವಜವನ್ನು ನೆಟ್ಟಿದ್ದರು.
ಆದರೆ ಪೊಲೀಸರು ಸುಖಲಾಲ್ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
‘ಸರ್ಕಾರದಿಂದಲೇ ಬಿಜೆಪಿ ನಾಯಕರ ರಕ್ಷಣೆ’:
‘ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಮಾಧಿಗೆ ಹಾನಿ ಮಾಡುವಾಗ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದರು’ ಎಂದು ಸ್ಥಳೀಯ ಮುಸ್ಲಿಮರು ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ. ವಿರೋಧ ಪಕ್ಷಗಳ ನಾಯಕರು ಈ ವಿಚಾರವನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿಯೂ ಪ್ರಸ್ತಾಪ ಮಾಡಿದರು. ‘ಸರ್ಕಾರವು ಬಿಜೆಪಿ ನಾಯಕರನ್ನು ರಕ್ಷಿಸುತ್ತಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.