ADVERTISEMENT

ಜಮ್ಮು–ಕಾಶ್ಮೀರದಲ್ಲಿ ಮಿನಿ ಬಸ್ ಕಮರಿಗೆ ಬಿದ್ದು 11 ಮಂದಿ ಸಾವು, 14 ಮಂದಿಗೆ ಗಾಯ

ಪಿಟಿಐ
Published 28 ಅಕ್ಟೋಬರ್ 2021, 15:06 IST
Last Updated 28 ಅಕ್ಟೋಬರ್ 2021, 15:06 IST
ದೋಡಾದಲ್ಲಿ ಗುರುವಾರ ಮಿನಿ ಬಸ್‌ ಕಮರಿಗೆ ಬಿದ್ದಿರುವುದು (ಪಿಟಿಐ ಚಿತ್ರ)
ದೋಡಾದಲ್ಲಿ ಗುರುವಾರ ಮಿನಿ ಬಸ್‌ ಕಮರಿಗೆ ಬಿದ್ದಿರುವುದು (ಪಿಟಿಐ ಚಿತ್ರ)   

ಭದರ್ವಾ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಬಟೋಟೆ-ಕಿಶ್ತ್ವಾರ್ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಮಿನಿ ಬಸ್‌ ಕಮರಿಗೆ ಉರುಳಿ ಬಿದ್ದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 11 ಜನರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ.

ಥಾತ್ರಿಯಿಂದ ದೋಡಾಗೆ ತೆರಳುತ್ತಿದ್ದ ಮಿನಿ ಬಸ್, ಸೋಯಿ-ಗ್ವಾರಿ ಬಳಿ ಚೆನಾಬ್ ನದಿಯ ದಡದಲ್ಲಿ ರಸ್ತೆಯಿಂದ ಸ್ಕಿಡ್ ಆಗಿ ಆಳ ಕಮರಿಗೆ ಕೆಳಮುಖವಾಗಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಲಾಮ್ ಹುಸೇನ್ ಶಾ (60), ಅವರ ಪುತ್ರ ಶಬ್ಬೀರ್ ಅಹ್ಮದ್ (30), ರಿತಿಕ್ ಶರ್ಮಾ (19), ಜಮ್ಮಾಲ್ ದಿನ್ (23), ಮೊಹಮ್ಮದ್ ಲತೀಫ್ (65), ಅಣ್ಣಾರಿ ದೇವಿ (55), ಬಹದ್ದೂರ್ ಸಿಂಗ್ (65), ಸಂತೋಷ್ ಕುಮಾರ್ (22) ಹಾಗೂ ರಾಜೇಶ್ ಕುಮಾರ್ (24) ಮೃತಪಟ್ಟವರು. ಇನ್ನೆರಡು ಶವಗಳನ್ನು ಗುರುತಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸ್ಥಳೀಯರ ನೆರವಿನಿಂದ ಪೊಲೀಸರು, ಸೇನೆ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ದೋಡಾದ ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಅವರನ್ನು ಏರ್ ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

‘ರಾಜ್ಯಪಾಲರ ವಿವೇಚನಾ ನಿಧಿಯಿಂದ ಮೃತರ ಕುಟುಂಬಕ್ಕೆ ₹2 ಲಕ್ಷ ಮತ್ತು ರಸ್ತೆ ಸಂತ್ರಸ್ತರ ನಿಧಿಯಿಂದ ₹1 ಲಕ್ಷವನ್ನು ತಕ್ಷಣದ ಪರಿಹಾರವಾಗಿ ನೀಡಲಾಗುವುದು. ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ದುಃಖಿತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಮನೋಜ್ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

‌ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.