ADVERTISEMENT

ಕೇರಳದ ಶೇ 12.8ರಷ್ಟು ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ: ಆರೋಗ್ಯ ಸಚಿವೆ ವೀಣಾ

ಪಿಟಿಐ
Published 11 ಅಕ್ಟೋಬರ್ 2021, 3:11 IST
Last Updated 11 ಅಕ್ಟೋಬರ್ 2021, 3:11 IST
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ (ಫೇಸ್‌ಬುಕ್‌ ಚಿತ್ರ: www.facebook.com/veenageorgeofficial)
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ (ಫೇಸ್‌ಬುಕ್‌ ಚಿತ್ರ: www.facebook.com/veenageorgeofficial)   

ತಿರುವನಂತಪುರ: 'ಕೇರಳದ ಒಟ್ಟು ಜನಸಂಖ್ಯೆಯ ಶೇಕಡಾ 12.8 ರಷ್ಟು ಜನರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದೆ ಎಂದು ಆರೋಗ್ಯ ಸಚಿವೆ ವೀಣಾಜಾರ್ಜ್‌ ಭಾನುವಾರ ತಿಳಿಸಿದರು.

‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯ ಅಂಗವಾಗಿ ತಿರುವನಂತಪುರದ ವೈದ್ಯಕೀಯ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗ, ಭಾರತೀಯ ಮನೋವೈದ್ಯಕೀಯ ಸಂಘದ ಕೇರಳ ಘಟಕ ಮತ್ತು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾನುವಾರ ಅವರು ಮಾತನಾಡಿದರು.

‘ಮಾನಸಿಕ ಆರೋಗ್ಯ ಸಾಕ್ಷರತೆ ಅತ್ಯಗತ್ಯವಾದದ್ದು. ಪ್ರತಿಯೊಬ್ಬರು ದೈಹಿಕ ಕಾಯಿಲೆಗಳ ಬಗ್ಗೆ ಗಮನಹರಿಸುತ್ತಾರೆ ಮತ್ತು ಅದಕ್ಕೆ ಸಕಾಲಿಕ ಚಿಕಿತ್ಸೆ ಪಡೆಯುತ್ತಾರೆ. ಆದರೆ ಹೆಚ್ಚಿನ ಜನರಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಅಥವಾ ವೈಜ್ಞಾನಿಕ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಜನರು ಮಾನಸಿಕ ಆರೋಗ್ಯದ ನಿಖರ ತಿಳುವಳಿಕೆ ಹೊಂದಿಲ್ಲ,’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಶೇ 12.8 ರಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ಅವರಿಗೆ ವೈಜ್ಞಾನಿಕ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಇವರಲ್ಲಿ ಕೇವಲ ಶೇ 15 ಜನರು ಮಾತ್ರ ವೈಜ್ಞಾನಿಕ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಚಿಕಿತ್ಸಾ ಕೇಂದ್ರಗಳು ಅಥವಾ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಜನ ಚಿಕಿತ್ಸೆಯಿಂದ ವಂಚಿತರಾಗುತ್ತಿಲ್ಲ. ಬದಲಾಗಿ ಜನರು ವೈದ್ಯಕೀಯ ಸೇವೆಗಳ ಪ್ರಯೋಜನ ಪಡೆಯದೇ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ತೀವ್ರಗೊಳಿಸುವುದು ಅತ್ಯಗತ್ಯ,’ ಎಂದು ಅವರು ಇದೇ ವೇಳೆ ಹೇಳಿದರು.

ಸಮಸ್ಯೆ ನಿವಾರಿಸಲು ಸರ್ಕಾರ ಕೈಗೊಂಡಿರುವ ಯೋಜನೆಗಳ ಕುರಿತೂ ಸಚಿವರು ಮಾಹಿತಿ ನೀಡಿದರು. ‘ಆರೋಗ್ಯ ಇಲಾಖೆಯೂ ತಳಮಟ್ಟದಿಂದ ಮಾನಸಿಕ ಆರೋಗ್ಯ ಚಟುವಟಿಕೆಗಳನ್ನು ತೀವ್ರಗೊಳಿಸಲು ಹೊರಟಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳು ಮತ್ತು ಮಾನಸಿಕ ಆರೋಗ್ಯ ಇಲಾಖೆಗಳ ಚಟುವಟಿಕೆಗಳನ್ನು ಬಲಪಡಿಸಲಾಗುವುದು ಮತ್ತು ಈ ವಿಷಯದ ಕುರಿತು ಸಂಶೋಧನೆಗೆ ಆದ್ಯತೆ ನೀಡಲಾಗುವುದು,‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.