ADVERTISEMENT

ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 12 ರಾಜ್ಯಸಭಾ ಸದಸ್ಯರು ಅಮಾನತು

ಪಿಟಿಐ
Published 29 ನವೆಂಬರ್ 2021, 13:24 IST
Last Updated 29 ನವೆಂಬರ್ 2021, 13:24 IST
ರಾಜ್ಯಸಭೆ
ರಾಜ್ಯಸಭೆ    

ನವದೆಹಲಿ: ಕಳೆದ ಅಧಿವೇಶನದಲ್ಲಿ ಅನುಚಿತ, ಅಶಿಸ್ತಿನ ವರ್ತನೆ ಪ್ರದರ್ಶಿಸಿದ ಕಾರಣಕ್ಕಾಗಿ ರಾಜ್ಯಸಭೆಯ ಕಾಂಗ್ರೆಸ್ ಸಂಸದೆ ಛಾಯಾ ವರ್ಮಾ, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಮತ್ತು ಟಿಎಂಸಿಯ ಡೋಲಾ ಸೇನ್ ಸೇರಿದಂತೆ ಹನ್ನೆರಡು ಪ್ರತಿಪಕ್ಷ ಸದಸ್ಯರನ್ನು ಸೋಮವಾರ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.

ಅಮಾನತುಗೊಂಡಿರುವ ಸದಸ್ಯರ ಪೈಕಿ ಆರು ಮಂದಿ ಕಾಂಗ್ರೆಸ್‌, ಇಬ್ಬರು ಟಿಎಂಸಿ ಮತ್ತು ಶಿವಸೇನಾ ಹಾಗೂ ಸಿಪಿಎಂ ಮತ್ತು ಸಿಪಿಐನ ತಲಾ ಒಬ್ಬರು ಸದಸ್ಯರು ಸೇರಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಗಳ ವಿರುದ್ಧ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ADVERTISEMENT

ಕಾಂಗ್ರೆಸ್‌ನಿಂದ ಫೂಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ ಅಮಾನತಾಗಿದ್ದಾರೆ.

ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಮತ್ತು ಅನಿಲ್ ದೇಸಾಯಿ, ಟಿಎಂಸಿಯ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ, ಸಿಪಿಎಂನಿಂದ ಎಲಮರಮ್ ಕರೀಂ ಮತ್ತು ಸಿಪಿಐನಿಂದ ಬಿನೋಯ್ ವಿಶ್ವಂ ಅವರು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡಿದ್ದಾರೆ.

ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದಸ್ಯರ ಅಮಾನತು ಘೋಷಿಸಿ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

ಅಮಾನತಿಗೆ ಖಂಡನೆ

ಕಳೆದ ಸಂಸತ್ತಿನ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ರಾಜ್ಯಸಭೆಯ 12 ಸದಸ್ಯರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ತಂದಿದ್ದಕ್ಕಾಗಿ 12 ವಿರೋಧ ಪಕ್ಷಗಳ ನಾಯಕರು ಸೋಮವಾರ ಸರ್ಕಾರವನ್ನು ಟೀಕಿಸಿದರು.
ಈ ಅಮಾನತು ಅನುಚಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಅವರು ಕರೆದಿದ್ದಾರೆ. ಈ ಕ್ರಮವು ಮೇಲ್ಮನೆಯ ಎಲ್ಲಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.