ADVERTISEMENT

ಯೋಗೀಶ್‌ಗೌಡ ಹತ್ಯೆ ಪ್ರಕರಣ ಭೇದಿಸಿದ್ದ ಸಿಬಿಐ ಅಧಿಕಾರಿಗೆ ಪದಕ

ಪಿಟಿಐ
Published 12 ಆಗಸ್ಟ್ 2020, 15:44 IST
Last Updated 12 ಆಗಸ್ಟ್ 2020, 15:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ ಭೇದಿಸಿದ ಮುಂಬೈನ ವಿಶೇಷ ಅಪರಾಧ ದಳದ ಎಎಸ್ಪಿ ಸುಭಾಷ್ ರಾಂರೂಪ್ ಸಿಂಗ್ ಹಾಗೂ ಕರ್ನಾಟಕದ ಬಿಜೆಪಿ ಮುಖಂಡ ಯೋಗೀಶ ಗೌಡ ಅವರ ಹತ್ಯೆ ಪ್ರಕರಣ ಭೇದಿಸಿದ್ದ ಬೆಂಗಳೂರಿನ ಇನ್‌ಸ್ಪೆಕ್ಟರ್ ರಾಕೇಶ್ ರಂಜನ್ ಸೇರಿದಂತೆ ಸಿಬಿಐನ 15 ಅಧಿಕಾರಿಗಳು, ಬೆಂಗಳೂರಿನ ಇನ್‌ಸ್ಪೆಕ್ಟರ್ ವಿಜಯಾ ವೈಷ್ಣವಿ ಸೇರಿದಂತೆ ವಿವಿಧ ರಾಜ್ಯಗಳ 121 ಪೊಲೀಸರು ‘ಕೇಂದ್ರ ಗೃಹ ಸಚಿವರ ಪದಕ’ಕ್ಕೆ ಭಾಜರಾಗಿದ್ದಾರೆ.

ಸುಭಾಷ್ ರಾಂರೂಪ್‌ ಸಿಂಗ್, ಎಎಸ್ಪಿ, ವಿಶೇಷ ಅಪರಾಧ ದಳ, ಮುಂಬೈ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಬಳಸಿದ್ದ ಬಂದೂಕನ್ನು ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಡೈವಿಂಗ್ ತಂಡದ ಸಹಾಯದಿಂದ ಥಾಣೆ ಸಮೀಪದ ಕಡಲಿನಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು. ಸುಭಾಷ್ ಸಿಂಗ್ ಮತ್ತು ಅವರ ತಂಡವು ಕೈಗೊಂಡಿದ್ದ ಈ ತನಿಖೆಯಿಂದ ಕರ್ನಾಟಕದ ಚಿಂತಕ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ ಅವರ ಹತ್ಯೆಯ ಸುಳಿವೂ ದೊರೆತಿತ್ತು.

ರಾಕೇಶ್ ರಂಜನ್, ಇನ್‌ಸ್ಪೆಕ್ಟರ್, ಬೆಂಗಳೂರು: ಕರ್ನಾಟಕದ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣವನ್ನು ಭೇದಿಸಿ, ಎಂಟು ಜನರ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಸಿದ್ದಾರೆ.

ADVERTISEMENT

ವಿಜಯಾವೈಷ್ಣವಿ, ಇನ್‌ಸ್ಪೆಕ್ಟರ್, ಬೆಂಗಳೂರು: ತಮಿಳುನಾಡಿಗೆ ಹೆಣ್ಣುಮಕ್ಕಳನ್ನು ಮಾನವ ಕಳ್ಳ ಸಾಗಾಣೆ ಮಾಡುತ್ತಿದ್ದನ್ನು ತಡೆಗಟ್ಟಿದ್ದರು.

ಸೆಫಸ್ ಕಲ್ಯಾಣ್ ಪರ್ಕೆಲಾ, ಪೊಲೀಸ್ ಅಧೀಕ್ಷಕ, ಸಿಬಿಐ, ಎಸಿಬಿ, ಹೈದರಾಬಾದ್: ಐ–ಮಾನಿಟರಿ ಅಡ್ವೈಸರಿ (ಐಎಂಎ) ಪ್ರಕರಣದ ತನಿಖೆಯನ್ನು ಕೈಗೊಂಡಿದ್ದ ಪೊಲೀಸ್ ಅಧೀಕ್ಷಕ ಸೆಫಸ್ ಕಲ್ಯಾಣ್ ಪರ್ಕೆಲಾ, ಮುಖ್ಯ ಆರೋಪಿ ಮನ್ಸೂರ್ ಖಾನ್ ವಿರುದ್ಧದ ಹಲವು ದಾಖಲೆಗಳನ್ನು ಪತ್ತೆ ಹಚ್ಚಿದ್ದರು. ಇಸ್ಲಾಮಿಕ್ ಬ್ಯಾಂಕ್ ವಿಧಾನ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆದಾರರನ್ನು ವಂಚಿಸಿರುವುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿದ್ದರು.

ವಿಭಾಕುಮಾರಿ, ಇನ್‌ಸ್ಪೆಕ್ಟರ್, ಮುಜಾಫ್ಪರ್‌ಪುರ, ಬಿಹಾರ: ಬಿಹಾರದ ಮುಜಾಫ್ಪರ್‌ಪುರದಲ್ಲಿನ ಬಾಲಕಿಯರ ವಸತಿನಿಲಯದಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಇನ್‌ಸ್ಪೆಕ್ಟರ್ ವಿಭಾಕುಮಾರಿ ಭೇದಿಸಿದ್ದರು. ಪ್ರಮುಖ ಆರೋಪಿ ಬ್ರಿಜೇಶ್ ಠಾಕೂರ್ ಮತ್ತು ಇತರ 11 ಮಂದಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.