ADVERTISEMENT

ಗುಜರಾತ್‌ನ 19 ಕಡೆ ಲಘು ಭೂಕಂಪನ

ಪಿಟಿಐ
Published 7 ಡಿಸೆಂಬರ್ 2020, 14:40 IST
Last Updated 7 ಡಿಸೆಂಬರ್ 2020, 14:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಅಹಮದಾಬಾದ್‌: ‘ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ 19 ಭಾಗಗಳಲ್ಲಿ ಸೋಮವಾರ ಬೆಳಿಗ್ಗೆ ಲಘು ಭೂಕಂಪನವಾಗಿದ್ದು ರಿಕ್ಟರ್‌ ಮಾಪಕದಲ್ಲಿ 1.7ರಿಂದ 3.3ರಷ್ಟು ತೀವ್ರತೆ ದಾಖಲಾಗಿದೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ. ಆಸ್ತಿ ಪಾಸ್ತಿಗೂ ಹಾನಿಯಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸೌರಾಷ್ಟ್ರದ ಕೆಲ ಭಾಗಗಳಲ್ಲಿ ಮಳೆಗಾಲ ಮುಗಿದ ನಂತರ ಭೂಮಿ ಕಂಪಿಸುವ ಅನುಭವವಾಗುವುದು ಸಹಜ. ಈ ವಿದ್ಯಮಾನದಿಂದ ಯಾರೂ ಗಾಬರಿಪಡುವ ಅಗತ್ಯವಿಲ್ಲ’ ಎಂದು ಗಾಂಧಿನಗರದಲ್ಲಿರುವ ಭೂಕಂಪ‍ನ ಸಂಶೋಧನಾ ಸಂಸ್ಥೆಯ (ಐಎಸ್‌ಆರ್‌) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಸೋಮವಾರ ಮುಂಜಾನೆ 1:42ಕ್ಕೆ ಭೂಮಿ ಕಂಪಿಸಿದೆ. ಗಿರ್‌ ಸೋಮನಾಥ ಜಿಲ್ಲೆಯ ತಲಾಲದಲ್ಲಿರುವ ಈಸ್ಟ್‌–ನಾರ್ತ್‌–ಈಸ್ಟ್‌ (ಇಎನ್‌ಇ) ಕೇಂದ್ರದಲ್ಲಿ 1.7ರಿಂದ 3.3ರಷ್ಟು ತೀವ್ರತೆ ದಾಖಲಾಗಿದೆ. ಆರು ಕಡೆ ಮೂರಕ್ಕಿಂತ ಹೆಚ್ಚು ತೀವ್ರತೆ ದಾಖಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಇದು ಮಳೆಗಾಲ ಪ್ರೇರಿತ ಭೂಕಂಪನ. ಎರಡು–ಮೂರು ತಿಂಗಳು ನಿರಂತರವಾಗಿ ಮಳೆ ಬಿದ್ದಾಗ ಬಿರುಕು ಬಿಟ್ಟ ಬಂಡೆಗಳಲ್ಲಿ ನೀರು ಸಂಗ್ರಹವಾಗುತ್ತದೆ. ಆಗ ಬಂಡೆಯ ರಂಧ್ರಗಳಲ್ಲಿ ಒತ್ತಡವು ಹೆಚ್ಚಾಗುತ್ತದೆ. ಹೀಗಾಗಿ ಭೂಮಿ ಕಂಪಿಸುತ್ತದೆ. ಮಳೆಗಾಲ ಮುಗಿದ ನಂತರದ ಅವಧಿಯಲ್ಲಿ ಗಿರ್‌ ಸೋಮನಾಥ, ಪೋರಬಂದರ್‌ ಮತ್ತು ಜಾಮ್‌ನಗರದ ವಿವಿಧ ಭಾಗಗಳಲ್ಲಿ ವಾಸಿಸುವ ಜನರಿಗೆ ಭೂಮಿ ಕಂಪಿಸಿದ ಅನುಭವವಾಗುತ್ತದೆ. ಹಿಂದೆಯೂ ಇಂತಹ ವಿದ್ಯಮಾನಗಳು ಜರುಗಿವೆ. ಹೀಗಾಗಿ ಯಾರೂ ಗಾಬರಿಪಡುವ ಅಗತ್ಯವಿಲ್ಲ’ ಎಂದು ಐಎಸ್‌ಆರ್‌ ನಿರ್ದೇಶಕ ಸುಮೇರ್‌ ಚೋಪ್ರಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.