ADVERTISEMENT

1965 India-Pakistan war: 'ವೀರ ಚಕ್ರ' ಪುರಸ್ಕೃತ ಪತಿಯ ಶೌರ್ಯ ನೆನೆದ ಮಹಿಳೆ

ಪಿಟಿಐ
Published 21 ಸೆಪ್ಟೆಂಬರ್ 2025, 15:34 IST
Last Updated 21 ಸೆಪ್ಟೆಂಬರ್ 2025, 15:34 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಲಖನೌ(ಉತ್ತರ ಪ್ರದೇಶ): ಲಖನೌ ನಿವಾಸಿ ವಿಜಯ ಕುಮಾರಿ ಅವರಿಗೆ ಸೆಪ್ಟೆಂಬರ್ ಕ್ಯಾಲೆಂಡರ್‌ನಲ್ಲಿ ಬರುವ ಕೇವಲ ಒಂದು ತಿಂಗಳಲ್ಲ. ಬದಲಿಗೆ ಇದು ಸ್ಮರಣೀಯ, ಹೆಮ್ಮೆ ಮತ್ತು ನೋವಿನ ಸಮಯ. ಈ ಬಗ್ಗೆ ಅವರು 'ಪಿಟಿಐ'ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

1965ರ ಸೆಪ್ಟೆಂಬರ್ 23ರಂದು ಕುಮಾವೂನ್ ರೆಜಿಮೆಂಟ್‌ನ 3ನೇ ಬೆಟಾಲಿಯನ್ (ರೈಫಲ್ಸ್)ನ ಕಮಾಂಡಿಂಗ್ ಆಫೀಸರ್‌ನಿಂದ ಪತ್ರವೊಂದು ನನ್ನ ಅತ್ತೆಯ ಮನೆಗೆ ತಲುಪಿತ್ತು. ಆಗ ನಾನು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ನನ್ನ ತವರು ಮನೆಯಲ್ಲಿದ್ದೆ.

ADVERTISEMENT

ಸರಿಯಾಗಿ 60 ವರ್ಷಗಳ ಹಿಂದೆ, ಕಾಶ್ಮೀರದಲ್ಲಿ ನಡೆದ ಭಾರತ-ಪಾಕ್ ಯುದ್ಧದಲ್ಲಿ ನನ್ನ ಪತಿ ಮೇಜರ್ ಧೀರೇಂದ್ರ ಸಿಂಗ್ ತಮ್ಮ ಕಾಲು ಕಳೆದುಕೊಂಡಿದ್ದರು. ಆಗ ಅವರಿಗೆ ಕೇವಲ 25 ವರ್ಷ. ಈ ಮಾಹಿತಿಯನ್ನು ಒಳಗೊಂಡ ಪತ್ರ ಅದಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದರೂ ಸಹ, ಅವರು ತಮ್ಮ ಹೋರಟವನ್ನು ನಿಲ್ಲಿಸಿರಲಿಲ್ಲ. ಅವರ ಶೌರ್ಯಕ್ಕಾಗಿ ದೇಶದ ಮೂರನೇ ಅತ್ಯುನ್ನತ ಯುದ್ಧ ಶೌರ್ಯ ಪ್ರಶಸ್ತಿಯಾದ ವೀರ ಚಕ್ರ ಪ್ರಶಸ್ತಿಯನ್ನು ಪಡೆದರು.

ಸೆಷ್ಟಂಬರ್‌ ನಿಜಕ್ಕೂ ನನಗೆ ವರ್ಷದ ಭಾವನಾತ್ಮಕ ಸಮಯ. ಏಕೆಂದರೆ ಈ ತಿಂಗಳು ನನ್ನ ಪತಿಯ ಧೈರ್ಯದ ನೆನಪುಗಳು ನನ್ನಲ್ಲಿ ತುಂಬಿ ತುಳುಕುತ್ತವೆ. ಅವರ ದೃಢಸಂಕಲ್ಪ ಅನುಕರಣೀಯ. ಅಲ್ಲದೇ ಧೈರ್ಯ ಮತ್ತು ನಾಯಕತ್ವದ ಗುಣ ನನಗೆ ಅಪಾರ ಹೆಮ್ಮೆಯನ್ನುಂಟುಮಾಡುವ ಸಂಗತಿಗಳಾಗಿವೆ ಎಂದು ಹೇಳಿದ್ದಾರೆ.

ಪತಿ ಕಾಲು ಕಳೆದುಕೊಂಡ ಸಂಗತಿ ಬಗ್ಗೆ ಮೊದಲು ತಿಳಿದ ಬಗ್ಗೆ ಮಾತನಾಡುತ್ತಾ, ಆಗ ಸಂವಹನ ಮಾರ್ಗಗಳು ಅಷ್ಟು ವೇಗವಾಗಿರಲಿಲ್ಲ. 1965ರ ಯುದ್ಧ ಪ್ರಾರಂಭವಾದಾಗಿನಿಂದ, ಪತ್ರಗಳು ಮಾತ್ರ ನಮಗೆ ಮಾಹಿತಿಯ ಏಕೈಕ ಮೂಲವಾಗಿದ್ದವು. ಅವರು 'ನಾನು ಚೆನ್ನಾಗಿದ್ದೇನೆ' ಎಂದಷ್ಟೇ ಪತ್ರಗಳ ಮೂಲಕ ತಿಳಿಸುತ್ತಿದ್ದರು. ವಿವರವಾದ ಮಾಹಿತಿಗಾಗಿ ನಾವು ಹೆಚ್ಚಾಗಿ ರೇಡಿಯೊವನ್ನು ಅವಲಂಬಿಸಿದ್ದೆವು.

ಯುದ್ಧ ಭೂಮಿಯಲ್ಲಿ ನನ್ನ ಪತಿಗೆ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ಪತ್ರದ ಮೂಲಕ ನಮಗೆ ಮಾಹಿತಿ ನೀಡಲಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದರು.

ಬಳಿಕ ಅವರು ಜೀವನ ಬದಲಾಯಿತು. 1966ರ ಏಪ್ರಿಲ್ ಹೊತ್ತಿಗೆ, ಕೃತಕ ಕಾಲನ್ನು ಜೋಡಿಸಲಾಯಿತು. ಬಳಿಕ ಲಖನೌದಲ್ಲಿ ನಿಯೋಜನೆಗೊಂಡರು. ಆದರೆ 1971ರಲ್ಲಿ ವೈದ್ಯಕೀಯ ಕಾರಣದಿಂದಾಗಿ ಅನರ್ಹ ಎಂದು ಘೋಷಿಸಲಾಯಿತು. ಆದರೂ ನಮ್ಮ ಪುತ್ರರು ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂದು ಅವರು ದೃಢನಿಶ್ಚಯ ಹೊಂದಿದ್ದರು. ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಭಾಗವಹಿಸಿದಾಗ ಅವರು ಅಪಾರ ಸಂತೋಷಪಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಸೈನ್ಯವನ್ನು ತೊರೆಯುವುದು ಅವರಿಗೆ ತುಂಬಾ ಕಷ್ಟಕರವಾಗಿತ್ತು. ಆದರೆ ಮಾನಸಿಕವಾಗಿ ಅವರು ಸದೃಢವಾಗಿದ್ದರು. ತಮ್ಮ ಮಕ್ಕಳು ಧೈರ್ಯ ಕಳೆದುಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ ವೈದ್ಯಕೀಯ ಕಾರಣಗಳಿಂದಾಗಿ ಸೈನ್ಯವನ್ನು ತೊರೆಯಬೇಕಾದ ಆಘಾತವನ್ನು ನಿಭಾಯಿಸಲು ಇದು ಅವರಿಗೆ ಸಹಾಯ ಮಾಡಿತು ಎಂದು ಪತಿಯನ್ನು ಗುಣಗಾನ ಮಾಡಿದ್ದಾರೆ.

ಸಿಂಗ್ ಅವರು 2025ರ ಏಪ್ರಿಲ್ 4,ರಂದು ದೆಹಲಿಯಲ್ಲಿರುವ ಸೇನೆಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.