ADVERTISEMENT

1984ರ ದಂಗೆ: ಸಜ್ಜನ್ ಕುಮಾರ್ ವಿರುದ್ಧ ವಿಚಾರಣೆಗೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 15:25 IST
Last Updated 16 ಜುಲೈ 2013, 15:25 IST

ನವದೆಹಲಿ (ಐಎಎನ್ಎಸ್): ತಮ್ಮ ವಿರುದ್ಧ 1984ರ ಸಿಖ್ ವಿರೋಧಿ ದಂಗೆ ಕಾಲದಲ್ಲಿ ಇಲ್ಲಿನ ಸುಲ್ತಾನಪುರಿ ಪ್ರದೇಶದಲ್ಲಿ ನಡೆದ 6 ಮಂದಿಯ ಕೊಲೆಗೆ ಸಂಬಂಧಿಸಿದಂತೆ ದೋಷಾರೋಪ ಹೊರಿಸಲು ವಿಚಾರಣಾ ನ್ಯಾಯಾಲಯ ಮಾಡಿದ್ದ ಆಜ್ಞೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾ ಮಾಡಿತು.

ನ್ಯಾಯಮೂರ್ತಿ ಸುರೇಶ್  ಕೈಟ್ ಅವರು ಸಜ್ಜನ್ ಕುಮಾರ್ ಮನವಿಯನ್ನು ವಜಾ ಮಾಡಿ, ಪ್ರಕರಣದಲ್ಲಿ ಅವರ ವಿರುದ್ಧ ನ್ಯಾಯಾಂಗ ವಿಚಾರಣೆಗೆ ಅನುವು ಮಾಡಿಕೊಟ್ಟರು. ಸಜ್ಜನ್ ಕುಮಾರ್ ವಿರುದ್ಧ ದಂಗೆ, ಕೊಲೆ, ಆಸ್ತಿಪಾಸ್ತಿ ಹಾನಿ ಆರೋಪಗಳನ್ನು ಹೊರಿಸಲಾಗಿತ್ತು.

ವಿಚಾರಣಾ ನ್ಯಾಯಾಲಯವು 2010ರ ಜುಲೈ ತಿಂಗಳಲ್ಲಿ ಸಜ್ಜನ್ ಕುಮಾರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಆರು ಮಂದಿಯ ಕೊಲೆ ಪ್ರಕರಣದಲ್ಲಿ ದೋಷಾರೋಪ ಹೊರಿಸುವಂತೆ ಆಜ್ಞಾಪಿಸಿತ್ತು. 1984ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಸಂಭವಿಸಿದ ಸಿಖ್ ವಿರೋಧಿ ದಂಗೆ ಕಾಲದಲ್ಲಿ ಈ ಹತ್ಯೆ ನಡೆದಿತ್ತು.

ಕುಮಾರ್ ಮತ್ತು ಇತರರ ವಿರುದ್ಧ ಮಾಡಲಾಗಿದ್ದ ಕ್ರಿಮಿನಲ್ ಸಂಚು ಆರೋಪಗಳನ್ನು ಕೈಬಿಡುವಂತೆ ಕೋರಿ ಅರ್ಜಿದಾರರಾದ ಶೀಲಾ ಕೌರ್ ಅವರು ಸಲ್ಲಿಸಿದ್ದ ಮನವಿಯನ್ನೂ ನ್ಯಾಯಮೂರ್ತಿ ಕೈಟ್ ವಜಾ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.