ಸಜ್ಜನ್ ಕುಮಾರ್
ಪಿಟಿಐ ಚಿತ್ರ
ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ಸಂದರ್ಭದಲ್ಲಿ ನಡೆದ ಹತ್ಯೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಡಿಸೆಂಬರ್ 16ಕ್ಕೆ ಕಾಯ್ದಿರಿಸಿದೆ.
ಗಲಭೆ ಸಂದರ್ಭದಲ್ಲಿ ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದ ಇಬ್ಬರ ಕೊಲೆಗೆ ಕಾರಣವಾದ ಆರೋಪ ಕುಮಾರ್ ಅವರ ಮೇಲಿದೆ.
ಇಂದು (ಶುಕ್ರವಾರ) ಆದೇಶ ಪ್ರಕಟಿಸಬೇಕಿದ್ದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು, ಆದೇಶದ ಪ್ರತಿ ಇನ್ನೂ ಸಿದ್ಧವಾಗಿಲ್ಲ ಎಂದು ಹೇಳಿ, ಮುಂದೂಡಿದ್ದಾರೆ.
1984ರ ನವೆಂಬರ್ 1ರಂದು ಜಸ್ವಂತ್ ಸಿಂಗ್ ಹಾಗೂ ಅವರ ಮಗ ತರುಣ್‌ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಅಂತಿಮ ವಾದ ಆಲಿಸಿದ ನಂತರ, ಆದೇಶ ಕಾಯ್ದಿರಿಸಲಾಗಿತ್ತು.
ಪತಿ ಹಾಗೂ ಮಗನ ಹತ್ಯೆಗೆ ಸಂಬಂಧಿಸಿದಂತೆ ಜಸ್ವಂತ್ ಅವರ ಪತ್ನಿ ದೂರು ನೀಡಿದ್ದರು. ಆ ಸಂಬಂಧ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತಾದರೂ, ವಿಶೇಷ ತನಿಖಾ ತಂಡ ತನಿಖೆಯನ್ನು ಕೈಗೆತ್ತಿಕೊಂಡಿತ್ತು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಕ್ಕಾಗಿ ಮಾರಕಾಸ್ತ್ರಗಳನ್ನು ಹಿಡಿದಿದ್ದ ಜನರ ಗುಂಪು, ಸಿಖ್ ಸಮುದಾಯದವರಿಗೆ ಸೇರಿದ ಸ್ಥಳಗಳಲ್ಲಿ ಭಾರಿ ಲೂಟಿ ನಡೆಸಿತ್ತು. ಗಲಭೆ ಸೃಷ್ಟಿಸಿ, ಅಪಾರ ಹಾನಿಗೆ ಕಾರಣವಾಗಿತ್ತು. ತಮ್ಮ ಮನೆಗೆ ನುಗ್ಗಿದ್ದ ಉದ್ರಿಕ್ತರು, ಪತಿ ಹಾಗೂ ಮಗನನ್ನು ಹತ್ಯೆ ಮಾಡಿದ್ದರು. ಬಳಿಕ ಲೂಟಿ ಮಾಡಿ, ಮನೆಗೆ ಬೆಂಕಿ ಹಚ್ಚಿದ್ದರು ಎಂದು ಜಸ್ವಂತ್ ಪತ್ನಿ ಹೇಳಿಕೆ ನೀಡಿರುವುದಾಗಿ ಪ್ರಾಸಿಕ್ಯೂಷನ್ ಆರೋಪಿಸಿದೆ.
ಕುಮಾರ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದ್ದ ನ್ಯಾಯಾಲಯವು, 2021ರ ಡಿಸೆಂಬರ್ 16ರಂದು ಅವರ ವಿರುದ್ಧ ಆರೋಪ ಹೊರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.