ADVERTISEMENT

2ಜಿ: ಐವರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2011, 19:30 IST
Last Updated 23 ನವೆಂಬರ್ 2011, 19:30 IST
2ಜಿ: ಐವರಿಗೆ ಜಾಮೀನು
2ಜಿ: ಐವರಿಗೆ ಜಾಮೀನು   

ನವದೆಹಲಿ (ಪಿಟಿಐ):  2ಜಿ ತರಂಗಾಂತರ ಹಂಚಿಕೆ ಹಗರಣದ ಆಪಾದಿತರಾದ ಐವರು ಕಾರ್ಪೊರೇಟ್ ಪ್ರಮುಖರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ. ಇದರಿಂದ ಈ ಹಗರಣದಲ್ಲಿ ಭಾಗಿಯಾದವರಿಗೆ ಇದೇ ಮೊದಲ ಬಾರಿಗೆ ಜಾಮೀನು ದೊರೆತಂತಾಗಿದೆ.

ಇದು ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲದಿಂದ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ,  ಡಿಎಂಕೆ ಸಂಸದೆ ಕನಿಮೊಳಿ ಸೇರಿದಂತೆ ಇತರ ಆರೋಪಿಗಳಲ್ಲಿ ಬಿಡುಗಡೆಯ ಬಗ್ಗೆ ಆಶಾಭಾವನೆ ಮೂಡಿಸಿದೆ.

ಯುನಿಟೆಕ್‌ನ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯಂಕಾ, ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ಕಾರ್ಯನಿರ್ವಾಹಕರಾದ ಹರಿ ನಾಯರ್, ಗೌತಮ್ ದೋಶಿ ಮತ್ತು ಸುರೇಂದ್ರ ಪಿಪಾರಾ ಅವರ ಬಿಡುಗಡೆಗೆ ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎಚ್.ಎಲ್.ದತ್ತು ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿದೆ. ಇವರೆಲ್ಲರನ್ನೂ ಕಳೆದ ಏಪ್ರಿಲ್ 20ರಂದು ಬಂಧಿಸಲಾಗಿತ್ತು.

ಈ ನಡುವೆ, ಈ ಬೆಳವಣಿಗೆಯಿಂದ ಉತ್ತೇಜಿತರಾದ ಕನಿಮೊಳಿ ಮತ್ತು ಇತರ ಐವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಡಿಸೆಂಬರ್ 1ಕ್ಕೆ ನಿಗದಿಯಾಗಿರುವ ತಮ್ಮ ಜಾಮೀನು ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಮನವಿ ಮಾಡಿದ್ದಾರೆ. ಎ.ರಾಜಾ ಅವರು 10 ತಿಂಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿರುವುದು ಮತ್ತು ಪ್ರಕರಣದಲ್ಲಿ ಈವರೆಗೆ ಯಾರಿಗೂ ಜಾಮೀನು ನೀಡದೇ ಇದ್ದುದು ಕಾನೂನು ತಜ್ಞರ ಅಸಮಾಧಾನಕ್ಕೆ ಕಾರಣವಾಗಿತ್ತು.

ಐವರು ಕಾರ್ಯನಿರ್ವಾಹಕರೂ ಐದು ಲಕ್ಷ ರೂಪಾಯಿ ಮೌಲ್ಯದ ಎರಡು ಭದ್ರತಾ ಠೇವಣಿ ಒದಗಿಸಬೇಕು ಎಂದು ನ್ಯಾಯಪೀಠವು ಷರತ್ತು ವಿಧಿಸಿದೆ.  63 ಪುಟಗಳ ತೀರ್ಪಿನ ಪ್ರಮುಖ ಅಂಶಗಳನ್ನು ಓದಿ ಹೇಳಿದ ನ್ಯಾಯಮೂರ್ತಿ ದತ್ತು, ತನಿಖೆ ಮುಗಿದು ಆರೋಪಪಟ್ಟಿ ಸಲ್ಲಿಸಿದ ಬಳಿಕವೂ ಆರೋಪಿಗಳನ್ನು ಬಂಧಿಸಿಡುವುದರಲ್ಲಿ ಅರ್ಥವಿದೆ ಎಂದು ನಮಗೆ ಅನಿಸುತ್ತಿಲ್ಲ ಎಂದು ಹೇಳಿದರು.

ವಿವಿಧ ಆರೋಪಿಗಳ ಪರ ವಾದ ಮಂಡಿಸಿದ್ದ ರಾಮ್ ಜೇಠ್ಮಲಾನಿ, ಮಜೀದ್ ಮೆಮನ್ ಮತ್ತು ಮುಕುಲ್ ರೋಹತಗಿ, ನ್ಯಾಯಾಲಯ ದೇಶದ ನ್ಯಾಯಾಂಗ ತತ್ವವನ್ನು ಎತ್ತಿಹಿಡಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ತಮ್ಮ ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಐವರೂ ಆಪಾದಿತರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ತಾವು ಯಾವುದೇ ರೀತಿಯಲ್ಲೂ ಸಾಕ್ಷ್ಯ ನಾಶ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಸಿಬಿಐ ಇವರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು. ಎಲ್ಲ ಆಪಾದಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ವಿರೋಧಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಜೈಲಿನಲ್ಲಿ ಇರುವ ಇತರ ಆಪಾದಿತರೆಂದರೆ ಎ. ರಾಜಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂದೋಲಿಯ, ದೂರಸಂಪರ್ಕ ಖಾತೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ, ಸ್ವಾನ್ ಟೆಲಿಕಾಂನ ಶಾಹಿದ್ ಉಸ್ಮಾನ್ ಬಲ್ವಾ, ಅವರ ಸಹೋದರ ಸಂಬಂಧಿ ಅಸಿಫ್ ಬಲ್ವಾ, ಸಹೋದ್ಯೋಗಿ ರಾಜೀವ್ ಅಗರವಾಲ್, ಕಲೈಜ್ಞರ್ ಟಿ.ವಿಯ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಮತ್ತು ಮುಂಬೈ ಮೂಲದ ಚಿತ್ರ ನಿರ್ಮಾಪಕ ಕರೀಂ ಮೊರಾನಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.