ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಡಿಎಂಕೆ ಸೋಮವಾರ ನೋಟಿಸ್ ನೀಡಿದೆ.
ಡಿಎಂಕೆ ನಾಯಕ ಟಿ.ಆರ್. ಬಾಲು ಈ ನೋಟಿಸ್ ನೀಡಿದ್ದು, `2ಜಿ ಹಗರಣದ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಪ್ರಕಾರ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಸಂಭಾವ್ಯ ನಷ್ಟದ ಬಗ್ಗೆ ಉತ್ಪ್ರೇಕ್ಷಿತ ಅಂಕಿ ಸಂಖ್ಯೆ ನೀಡಲಾಗಿದೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ವಿಶೇಷ ಚರ್ಚೆ ನಡೆಯಬೇಕು' ಎಂದು ಆಗ್ರಹಿಸಿದ್ದಾರೆ.
`ಇದರಿಂದಾಗಿ 2ಜಿ ವಿಚಾರಕ್ಕೆ ಹೊಸ ತಿರುವು ಬಂದಿದೆ. ಅಲ್ಲದೇ ಸಿಎಜಿಯಲ್ಲಿ ಲೆಕ್ಕಪತ್ರ ಸಿದ್ಧಪಡಿಸುವಾಗ ಅನುಸರಿಸುವ ಮಾನದಂಡಗಳ ಕುರಿತು ಪ್ರಶ್ನೆ ಎದ್ದಿದೆ. ಸಿಎಜಿಗೆ ಸಂವಿಧಾನದ ಅಡಿ ನೀಡಲಾದ ಅಧಿಕಾರದ ಕುರಿತೂ ಚರ್ಚಿಸಬೇಕಿದೆ' ಎಂದೂ ಬಾಲು ಹೇಳಿದ್ದಾರೆ.
ಯುಪಿಎ ಮಿತ್ರಪಕ್ಷ ಡಿಎಂಕೆ ನೋಟಿಸ್ ನೀಡಿದಲ್ಲಿ ಈ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ವಿ. ನಾರಾಯಣಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಡಿಎಂಕೆ ನೋಟಿಸ್ ನೀಡಿದೆ. ಹಗರಣದಲ್ಲಿ ಅಂದಿನ ದೂರಸಂಪರ್ಕ ಸಚಿವ ಎ.ರಾಜಾ, ರಾಜ್ಯಸಭೆ ಸದಸ್ಯೆ ಕನಿಮೋಳಿ ಮತ್ತಿತರ ಡಿಎಂಕೆ ನಾಯಕರ ಹೆಸರುಗಳು ಕೇಳಿ ಬಂದ್ದ್ದಿದವು. ಇವರಿಬ್ಬರೂ ಕೆಲ ಕಾಲ ಜೈಲು ಸೇರಿದ್ದರು. ಅಲ್ಲದೆ ಪಕ್ಷ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.