ADVERTISEMENT

2ಜಿ ತರಂಗಾಂತರ ವಿಶೇಷ ವಿಚಾರಣಾ ಪೀಠ ರಚನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಗಾಗಿ ಇಬ್ಬರು ನ್ಯಾಯಾಧೀಶರ ವಿಶೇಷ ನ್ಯಾಯಪೀಠವೊಂದನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯ ಶುಕ್ರವಾರ ರಚಿಸಿದ್ದಾರೆ.

ಸುಪ್ರೀಂಕೋರ್ಟ್ 122 ಟೆಲಿಕಾಂ ಲೈಸೆನ್ಸ್‌ಗಳನ್ನು ರದ್ದುಪಡಿಸಿದ ನಂತರ ಕೇಂದ್ರ ಸರ್ಕಾರ, ಟೆಲಿಕಾಂ ಕಂಪೆನಿಗಳು ಹಾಗೂ ಇತರರು ಸಲ್ಲಿಸಿರುವ ಹಲವು ಅರ್ಜಿಗಳ ತ್ವರಿತ ವಿಚಾರಣೆಗಾಗಿ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘಿ ಮತ್ತು ಎ.ಕೆ. ಪಟ್ನಾಯಕ್ ಅವರನ್ನೊಳಗೊಂಡ ಪೀಠ ರಚಿಸಲಾಗಿದೆ.

ಹಗರಣದಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಿಗೆ `ಕ್ಲೀನ್ ಚಿಟ್~ ನೀಡಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಜನತಾ  ಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯಂ ಸ್ವಾಮಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಾ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್, ವಿವಾದಿತ 2ಜಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಕೈಗೆತ್ತಿಕೊಳ್ಳಲು ವಿಶೇಷ ನ್ಯಾಯಪೀಠಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.
 
ಈ ಹಿನ್ನೆಲೆಯಲ್ಲಿ ಸ್ವಾಮಿಯವರ ಅರ್ಜಿಯನ್ನೂ ವಿಶೇಷ ಪೀಠವೇ ವಿಚಾರಣೆ ನಡೆಸಲು ಅನುವಾಗುವಂತೆ ಮುಖ್ಯ ನ್ಯಾಯಮೂರ್ತಿಗಳಿಂದ ನಿರ್ದೇಶನ ಪಡೆಯುವಂತೆ ಸುಪ್ರೀಂಕೋರ್ಟ್ ರಿಜಿಸ್ಟ್ರಿಯವರಿಗೆ ಅವರು ಸೂಚಿಸಿದರು.

ಈ ಹಿಂದೆ, ಹಗರಣದಲ್ಲಿ ಸಿಂಘ್ವಿ ಅವರೊಡನೆ ತೀರ್ಪು ನೀಡಿದ್ದ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರು ನಿವೃತ್ತರಾಗಿರುವುದರಿಂದ ಅವರ ಜಾಗಕ್ಕೆ ಪಟ್ನಾಯಕ್ ಅವರನ್ನು ನೇಮಿಸಿ ಹೊಸ ಪೀಠವನ್ನು ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.