ADVERTISEMENT

2ಜಿ ತರಂಗಾಂತರ ಹಂಚಿಕೆ ಹಗರಣ: ಜೆಪಿಸಿ ಸಭೆಯಿಂದ ದೂರ ಉಳಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಾಕ್ಷಿಗಳಾಗಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಪರಿಗಣಿಸಬೇಕೆಂಬ ತಮ್ಮ ಪಟ್ಟನ್ನು ಸಡಿಲಿಸದ ಬಿಜೆಪಿಯ ಆರು ಸಂಸದರು, ಗುರುವಾರ ನಡೆದ ಜಂಟಿ ಸಂಸದೀಯ ಸಮಿತಿ ಸಭೆ (ಜೆಪಿಸಿ)ಯಿಂದ ದೂರ ಉಳಿದಿದ್ದಾರೆ.

ಅಕ್ಟೋಬರ್ 11ರಂದು ನಡೆದ ಸಭೆಯಿಂದಲೂ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ತಮ್ಮ ಬೇಡಿಕೆಯಂತೆ ಪ್ರಧಾನಿ ಮತ್ತು ಹಣಕಾಸು ಸಚಿವರನ್ನೊಳಗೊಂಡ ಸಾಕ್ಷಿಗಳ ಅಂತಿಮ ಪಟ್ಟಿ ಸಿದ್ಧಗೊಳ್ಳುವವರೆಗೂ 2ಜಿ ಸಂಬಂಧ ನಡೆಯುವ ಜಂಟಿ ಸಂಸದೀಯ ಸಮಿತಿ ಸಭೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಮಾಜಿ ಹಣಕಾಸು ಸಚಿವ ಹಾಗೂ ಜೆಪಿಸಿ ಸದಸ್ಯರೂ ಆಗಿರುವ ಯಶವಂತ್ ಸಿನ್ಹಾ ಅವರು, `2ಜಿ ತರಂಗಾಂತರ ಹಂಚಿಕೆ ಸಂಬಂಧ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಪ್ರಧಾನಿಯವರೇ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ.

ಹಾಗಾಗಿ, ಅವರೇ ಜೆಪಿಸಿ ಸಭೆಗೆ ಹಾಜರಾಗಿ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ~ ಎಂದು ಜೆಪಿಸಿ ಮುಖ್ಯಸ್ಥ ಪಿ.ಸಿ. ಚಾಕೊ ಅವರಿಗೆ ಈಚೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

`ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕ ಪತ್ರ ಸ್ಥಾಯಿ ಸಮಿತಿ (ಪಿಎಸಿ) ಎದುರು ಹಾಜರಾಗಲು ಮುಂದಾಗಿದ್ದ ಪ್ರಧಾನಿ ಅವರಿಗೆ, ಜೆಪಿಸಿ ಸಭೆ ಮುಂದೆ ಹಾಜರಾಗಲು ಯಾವ ಅಡ್ಡಿ, ಆತಂಕಗಳು ಇಲ್ಲ~ ಎಂದೂ ಸಿನ್ಹಾ ಅವರು ಹೇಳಿದ್ದಾರೆ."

ಬಿಜೆಪಿ ಸದಸ್ಯರ ಈ ಬೇಡಿಕೆಗೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸಿ ನಿರ್ದೇಶನ ನೀಡುವಂತೆ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಜೆಪಿಸಿ ಮುಖ್ಯಸ್ಥ ಚಾಕೊ ಅವರು ಮನವಿ ಮಾಡಿದ್ದರು.

ಸ್ಪಂದಿಸದ ಸ್ಪೀಕರ್:  `ಈ ಹಂತದಲ್ಲಿ ನಾನು ಮಧ್ಯ ಪ್ರವೇಶಿಸುವುದು ಸರಿಯಲ್ಲ. ನನ್ನ ಬಳಿ ಬರುವುದಕ್ಕೆ ಮೊದಲು ಹಗರಣ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಿ~ ಎಂದು ಚಾಕೊ ಅವರಿಗೆ ಸೂಚಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.