ADVERTISEMENT

2ಜಿ ತರಂಗಾಂತರ ಹಂಚಿಕೆ ಹಗರಣ :ಮೊದಲ ಬಾರಿ ಜಾಮೀನು ಕೋರಿದ ರಾಜಾ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST
2ಜಿ ತರಂಗಾಂತರ ಹಂಚಿಕೆ ಹಗರಣ :ಮೊದಲ ಬಾರಿ ಜಾಮೀನು ಕೋರಿದ ರಾಜಾ
2ಜಿ ತರಂಗಾಂತರ ಹಂಚಿಕೆ ಹಗರಣ :ಮೊದಲ ಬಾರಿ ಜಾಮೀನು ಕೋರಿದ ರಾಜಾ   

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಒಂದು ವರ್ಷಕ್ಕೂ ಹೆಚ್ಚುಕಾಲದಿಂದ ಜೈಲು
ಶಿಕ್ಷೆ ಅನುಭವಿಸುತ್ತಿರುವ ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಕೊನೆಗೂ ಜಾಮೀನು ಕೋರಿ ಬುಧವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶಿಕ್ಷೆ ಪ್ರಕಟಗೊಂಡ ತಕ್ಷಣವೇ ಪ್ರಕರಣದ ಇತರ ಆರೋಪಿಗಳು ಕೋರ್ಟ್‌ಗೆ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು. ನಂತರದಲ್ಲಿ ಕೆಲವರು ಜಾಮೀನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು. ಆದರೆ ರಾಜಾ ಮಾತ್ರಒಮ್ಮೆಯೂ ಜಾಮೀನು ಅರ್ಜಿಯನ್ನು ಸಲ್ಲಿಸಿರಲಿಲ್ಲ.

ಈ ಪ್ರಕರಣದಲ್ಲಿ ದೂರಸಂಪರ್ಕ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ.ಕಳೆದ ಫೆ.2ರಿಂದ ಜೈಲಿನಲ್ಲಿರುವ ರಾಜಾ, `ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ~ ಎಂದು ದೂರಿದ್ದಾರೆ.

 `ಈ ಪ್ರಕರಣದ ಸಹ ಆರೋಪಿಗಳು ಈಗಾಗಲೇ ಜಾಮೀನು ಪಡೆದಿದ್ದಾರೆ. ಹಾಗಾಗಿ ನನಗೂ ಜಾಮೀನು ನೀಡಿ~ ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ.ಸೈನಿ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ ರಾಜಾ ಮನವಿ ಮಾಡಿಕೊಂಡಿದ್ದಾರೆ.

ರಾಜಾ ಅರ್ಜಿಗೆ ಇದೇ 11ರೊಳಗೆ ಉತ್ತರಿಸುವಂತೆ ಸಿಬಿಐಗೆ ಕೋರ್ಟ್ ನೋಟಿಸ್ ನೀಡಿದೆ.ಡಿಎಂಕೆ ಸಂಸದೆ ಕನಿಮೊಳಿ, ಸಿದ್ಧಾರ್ಥ ಬೆಹುರಾ, ರಾಜಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂಡೋಲಿಯಾ, ರಿಲಯನ್ಸ್ ಅನಿಲ್ ಧೀರೂಬಾಯಿ ಅಂಬಾನಿ ಸಮೂಹದ (ಎಡಿಎಜಿ) ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಶಿ, ಎಡಿಎಜಿ ಸಮೂಹದ ಅಧ್ಯಕ್ಷ ಸುರೇಂದ್ರ ಪಿಪಾರಾ, ಹಿರಿಯ ಉಪಾಧ್ಯಕ್ಷ ಹರಿ ನಾಯರ್, ಯುನಿಟೆಕ್‌ನ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಮ್ ಶಾಹಿದ್ ಉಸ್ಮಾನ್ ಬಲ್ವಾ ಹಾಗೂ ವಿನೋದ್ ಗೋಯೆಂಕಾ  ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಪುನರ್‌ಪರಿಶೀಲನಾ ಅರ್ಜಿ ವಾಪಸ್ 
2ಜಿ ತರಂಗಾಂತರ ಹಂಚಿಕೆ ಹಗರಣದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.