ADVERTISEMENT

2ಜಿ ಹಗರಣ; ಚಿದು ವಿಚಾರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಸಿಬಿಐ ಮಂಗಳವಾರ ವಿರೋಧ ವ್ಯಕ್ತಪಡಿಸಿದೆ.

ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸುವುದು ತನ್ನ ಅಧಿಕಾರದ ವ್ಯಾಪ್ತಿ ಮೀರಿದ್ದು ಎಂದು ಅದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

 ಎ.ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದಾಗ ನಡೆದ ಈ ಹಗರಣದ ತನಿಖೆ ಪೂರ್ಣಗೊಂಡಿದೆ ಎಂದು ಹೇಳಿದ ಸಿಬಿಐ, ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯಂ ಸ್ವಾಮಿ ಅವರು ಸಲ್ಲಿಸಿದ ಮನವಿಯನ್ನು ವಿರೋಧಿಸಿತು.

ಹಗರಣದಲ್ಲಿ ರಾಜಾ ಜತೆ ಚಿದಂಬರಂ ಕೂಡ ಭಾಗಿಯಾಗಿದ್ದಾರೆ, ಆದ ಕಾರಣ ಅವರನ್ನೂ ವಿಚಾರಣೆಗೆ ಒಳಪಡಿಸಬೇಕೆಂದು ಅವರು ಮನವಿಯಲ್ಲಿ ಕೋರಿದ್ದರು.

 ಈ ಮನವಿಗೆ ಕೇಂದ್ರವೂ ಆಕ್ಷೇಪ ವ್ಯಕ್ತಪಡಿಸಿತು. ಸುಬ್ರಮಣಿಯಂ ಸ್ವಾಮಿ ಅವರು ಇಂಥದ್ದೇ ಮನವಿಯನ್ನು ವಿಚಾರಣಾ ನ್ಯಾಯಾಲಯದಲ್ಲಿಯೂ ಸಲ್ಲಿಸಿದ್ದಾರೆ, ಹಾಗಾಗಿ ಈ ವಿಚಾರವನ್ನು ವಿಶೇಷ ಸಿಬಿಐ ನ್ಯಾಯಾಲಯ ಇತ್ಯರ್ಥಪಡಿಸುತ್ತದೆ ಎಂದು ಅದು ಹೇಳಿತು.

ಸುಪ್ರೀಂಕೋರ್ಟ್ ಇಂಥ ಆದೇಶವನ್ನು ನೀಡಲಾಗದು, ಇದು ವಿಚಾರಣಾ ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ಸಿಬಿಐ ತಿಳಿಸಿತು.

ಹೆಚ್ಚಿನ ವಿಚಾರಣೆ ಅಥವಾ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳನ್ನು ಸೇರಿಸುವ ವಿಚಾರವನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಸಿಬಿಐ ಪರ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ಅವರು, ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಹಾಗೂ ಎ.ಕೆ.ಆಂಟನಿ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.