ADVERTISEMENT

2 ಜಿ ಹಗರಣ: ಚಿದಂಬರಂ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 9:00 IST
Last Updated 23 ಫೆಬ್ರುವರಿ 2012, 9:00 IST

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಪ್ರಕರಣದಲ್ಲಿ ಗೃಹ ಸಚಿವ ಪಿ. ಚಿದಂಬರಂ ಅವರು ಯಾವುದೇ ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾಗಿಲ್ಲ ಎಂದು ಹೇಳಿ ಅವರನ್ನು ಆರೋಪಿಯನ್ನಾಗಿ ಮಾಡಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಚಿದಂಬರಂ ಅವರು ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರಷ್ಟೇ ತಪ್ಪಿತಸ್ಥರು ಎಂದು ಆಪಾದಿಸಿರುವ ಸುಬ್ರಮಣಿಯನ್ ಸ್ವಾಮಿ ಅವರು ತರಂಗಾಂತರ ದರ ನಿಗದಿಗೊಳಿಸುವಲ್ಲಿ ಮತ್ತು ಟೆಲಿಕಾಂ ಕಂಪೆನಿಗಳಿಗೆ ವಿದೇಶೀ ಸಂಸ್ಥೆಗಳ ಷೇರು ಬಿಡುಗಡೆ ಮಾಡಲು ಅವಕಾಶ ನೀಡುವಲ್ಲಿ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.

 ಚಿದಂಬರಂ ಅವರು ಹಣಕಾಸು ಸಚಿವರಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಇತರ ಕ್ರಿಮಿನಲ್ ಕಾನೂನುಗಳ ಅಪರಾಧ ಎಸಗಿದ್ದಾರೆ ಎಂಬುದನ್ನು ಮೇಲ್ನೋಟಕ್ಕೇ ಸಾಬೀತುಪಡಿಸಲು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾಕ್ಷ್ಯಾಧಾರ ಎಂದು ಸ್ವಾಮಿ ತಿಳಿಸಿದ್ದರು.

ಆದರೆ 2ಜಿ ತರಂಗಾಂತರ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯವು ಫೆಬ್ರುವರಿ 4ರಂದು ಸ್ವಾಮಿ ಅವರ ಮನವಿಯನ್ನು ತಳ್ಳಿಹಾಕಿತ್ತು. ಚಿದಂಬರಂ ಅವರು ಯಾವುದೇ ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾಗಿಲ್ಲ ಅಥವಾ ರಾಜಾ ಅವರ ಜೊತೆಗೆ ತೆಗೆದುಕೊಂಡ ನಿರ್ಧಾರಗಳಲ್ಲಿ ಯಾವುದೇ ಲಾಭ ಗಳಿಸಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

2008ರಲ್ಲಿ ವಿವಾದಾತ್ಮಕ 2 ಜಿ ತರಂಗಾಂತರ ಹಂಚಿಕೆ ಕಾಲದಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ತರಂಗಾಂತರ ದರಗಳನ್ನು 2001ರ ಮಟ್ಟದಲ್ಲಿ ಇರಿಸುವ ಮತ್ತು ಎರಡು ಕಂಪೆನಿಗಳ ಈಕ್ವಿಟಿಯನ್ನು ದುರ್ಬಲಗೊಳಿಸುವ ಎರಡು ನಿರ್ಧಾರಗಳಲ್ಲಿ ಮಾತ್ರ ಭಾಗಿಯಾಗಿದ್ದರು. ಇವು ಕ್ರಿಮಿನಲ್ ಅಲ್ಲ ಎಂದು ನ್ಯಾಯಾಲಯ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT