ADVERTISEMENT

2 ದಿನದ ಬಳಿಕ ತಲುಪಿದ ಸ್ಪೀಡ್ ಪೋಸ್ಟ್

ಅಫ್ಜಲ್ ಕುಟುಂಬದವರ ಮನವಿ ಪರಿಶೀಲನೆ: ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2013, 19:59 IST
Last Updated 11 ಫೆಬ್ರುವರಿ 2013, 19:59 IST
ನವದೆಹಲಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಅಫ್ಜಲ್ ಗುರು ಕುಟುಂಬಕ್ಕೆ ಕಳುಹಿಸಲಾಗಿದ್ದ ಸ್ಪೀಡ್ ಪೋಸ್ಟ್‌ನ ರಸೀದಿಯನ್ನು ಪ್ರದರ್ಶಿಸಿದರು
ನವದೆಹಲಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಅಫ್ಜಲ್ ಗುರು ಕುಟುಂಬಕ್ಕೆ ಕಳುಹಿಸಲಾಗಿದ್ದ ಸ್ಪೀಡ್ ಪೋಸ್ಟ್‌ನ ರಸೀದಿಯನ್ನು ಪ್ರದರ್ಶಿಸಿದರು   

ಶ್ರೀನಗರ (ಪಿಟಿಐ, ಐಎಎನ್‌ಎಸ್):  ಸಂಸತ್ತಿನ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿ ಮಾಡುವ ಮಾಹಿತಿ ಹೊಂದಿದ್ದ `ಸ್ಪೀಡ್ ಪೋಸ್ಟ್' ಸೋಮವಾರ ಗುರುವಿನ ಕುಟುಂಬಕ್ಕೆ ತಲುಪಿದೆ.

ಈ ಮಧ್ಯೆ ಅಫ್ಜಲ್ ಗುರು  ಸಮಾಧಿ ಸ್ಥಳಕ್ಕೆ ತೆರಳಲು ಕುಟುಂಬದವರು ಮಾಡಿಕೊಂಡಿರುವ ಮನವಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದೆಹಲಿಯ ತಿಹಾರ್ ಜೈಲಿನ ಅಧಿಕಾರಿಗಳು ಕಳುಹಿಸಿರುವ ಪತ್ರವು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಎರಡು ದಿನಗಳ ಬಳಿಕ ಕುಟುಂಬದವರಿಗೆ ತಲುಪಿದೆ.

ಸೆಂಟ್ರಲ್ ಜೈಲು ಸಂಖ್ಯೆ 3ರ ವರಿಷ್ಠಾಧಿಕಾರಿ ಕಚೇರಿಯು ಈ ಪತ್ರ ಕಳುಹಿಸಿದ್ದು, `ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಅಫ್ಜಲ್ ಗುರುವಿನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದು,  ಫೆ.9ರಂದು ಬೆಳಿಗ್ಗೆ 8 ಗಂಟೆಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗುವುದು' ಎಂದು ಪತ್ರದಲ್ಲಿ ಬರೆಯಲಾಗಿದೆ.

ಫೆಬ್ರುವರಿ 6ರಂದು ಬರೆಯಲಾಗಿರುವ ಈ ಪತ್ರವನ್ನು ಅಫ್ಜಲ್ ಗುರುವಿನ ಪತ್ನಿ ತಬಸ್ಸುಮ್ ಗುರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಸ್ವೀಕರಿಸಿದ್ದಾರೆ.

ಸ್ಪೀಡ್ ಪೋಸ್ಟ್‌ನಲ್ಲಿ ದೆಹಲಿಯಿಂದ ಕಳುಹಿಸಲಾಗಿದ್ದ ಪತ್ರ ಶನಿವಾರ ಸಂಜೆ ಶ್ರೀನಗರದ ಅಂಚೆ ಕಚೇರಿಗೆ ತಲುಪಿತ್ತು. ಭಾನುವಾರ ರಜಾದಿನವಾದ್ದರಿಂದ ಪತ್ರವನ್ನು ಸೋಮವಾರ ಅಫ್ಜಲ್ ಕುಟುಂಬಕ್ಕೆ ತಲುಪಿಸಲಾಗಿದೆ ಎಂದು ಅಂಚೆ ಅಧಿಕಾರಿಗಳು ಹೇಳಿದ್ದಾರೆ.

`ಭಾನುವಾರ ರಜಾ ದಿನವಾಗಿದ್ದರಿಂದ ಪತ್ರವನ್ನು ಸೋಮವಾರ ಕುಟುಂಬಕ್ಕೆ ತಲುಪಿಸಲಾಗಿದೆ' ಎಂದು ಜಮ್ಮು ಮತ್ತು ಕಾಶ್ಮೀರ ವಲಯದ  ಮುಖ್ಯ ಪೋಸ್ಟ್ ಮಾಸ್ಟರ್  ಜಾನ್ ಸಾಮ್ಯುಯೆಲ್ ಸುದ್ದಿಗಾರರಿಗೆ ಹೇಳಿದ್ದಾರೆ.

ಅಫ್ಜಲ್ ಗುರುವನ್ನು ಗಲ್ಲಿಗೇರಿಸುವ ವಿಷಯದ ಕುರಿತಾಗಿ ಜೈಲಿನ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಟಿವಿ ವಾಹಿನಿಯೊಂದರ ಮೂಲಕ ಈ ವಿಷಯ ತಮಗೆ ತಿಳಿಯಿತು ಎಂದು ಆತನ ಕುಟುಂಬದ ಸದಸ್ಯರು ಆರೋಪಿಸಿದ್ದರು.

ಆದರೆ ಈ ಆರೋಪ ಅಲ್ಲೆಗಳೆದಿದ್ದ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್, ಸ್ಪೀಡ್ ಪೋಸ್ಟ್ ಮೂಲಕ ಗುರುವಿನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಪತ್ರ ಕಳುಹಿಸಿರುವ ವಿಚಾರವಾಗಿ ಪರಿಶೀಲಿಸುವಂತೆ ಕಾಶ್ಮೀರದ ಡಿಜಿಪಿ ಅವರಿಗೂ ಸೂಚಿಸಲಾಗಿದೆ ಎಂದು ಹೇಳಿದ್ದರು.

ಮುಂದುವರಿದ ಕರ್ಫ್ಯೂ (ಶ್ರೀನಗರ ವರದಿ): ಅಫ್ಜಲ್ ಗುರುವನ್ನು ಶನಿವಾರ ಗಲ್ಲಿಗೇರಿಸಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಕಾಶ್ಮೀರ ಕಣಿವೆಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸೋಮವಾರವೂ ಮುಂದುವರಿದಿದ್ದು ಗಡಿ ಭದ್ರತಾ ಪಡೆಯ 14 ತುಕಡಿಗಳನ್ನು  ನಿಯೋಜಿಸಲಾಗಿದೆ.

ಈ ಮಧ್ಯೆ, ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಂಟಾದ ಘರ್ಷಣೆಯಲ್ಲಿ ಭದ್ರತಾ ಪಡೆಯ ದಾಳಿಯಿಂದ ಗಾಯಗೊಂಡಿದ್ದ 14 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ.  ಹೀಗಾಗಿ ಪ್ರತಿಭಟನೆಯಿಂದಾಗಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.

ಸಮಾಧಿ ಭೇಟಿಗೆ ಅವಕಾಶ ನೀಡಿ- ಓವೈಸಿ: ತಿಹಾರ್ ಜೈಲಿನಲ್ಲಿರುವ ಅಫ್ಜಲ್ ಗುರುವಿನ ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ಆತನ ಪತ್ನಿಗೆ ಅವಕಾಶ ನೀಡಬೇಕು ಎಂದು ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್  (ಎಂಐಎಂ) ಮುಖ್ಯಸ್ಥ ಹಾಗೂ ಸಂಸತ್ ಸದಸ್ಯ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ.

`ಗಲ್ಲಿಗೇರಿಸುವುದಕ್ಕೂ ಮುನ್ನ ಅಫ್ಜಲ್ ಗುರುವಿಗೆ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವಕಾಶ ನೀಡಬೇಕಿತ್ತು. ಒಂದು ವೇಳೆ ಅದು ಸಾಧ್ಯವಾಗದೇ ಹೋಗಿದ್ದರೆ, ಕನಿಷ್ಠ ಪಕ್ಷ  ದೂರವಾಣಿ ಮೂಲಕ ಮಾತನಾಡುವುದಕ್ಕಾದರೂ ಅವಕಾಶ ನೀಡಬೇಕಿತ್ತು' ಎಂದು ಒವೈಸಿ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಪತ್ನಿಗೆ ಪತ್ರ ಬರೆದಿದ್ದ ಅಫ್ಜಲ್
ನವದೆಹಲಿ (ಐಎಎನ್‌ಎಸ್): ಫೆಬ್ರುವರಿ 9ರಂದು ನೇಣುಗಂಬ ಏರುವುದಕ್ಕೆ ಕೆಲವು ಗಂಟೆಗಳ ಮೊದಲು ಅಫ್ಜಲ್ ಗುರು ತನ್ನ ಪತ್ನಿಗೆ ಪತ್ರ ಬರೆದಿದ್ದ ಎಂದು ಜೈಲಿನ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಉರ್ದು ಭಾಷೆಯಲ್ಲಿರುವ ಪತ್ರವನ್ನು ಶನಿವಾರ ದೆಹಲಿಯಿಂದ ಕಳುಹಿಸಲಾಗಿದ್ದು, ಕಾಶ್ಮೀರದಲ್ಲಿರುವ ಆತನ ಪತ್ನಿಗೆ ಪತ್ರ ಇನ್ನಷ್ಟೇ ತಲುಪಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

`ಶನಿವಾರ ಬೆಳಿಗ್ಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದಾಗ ಆತ ಶಾಂತನಾಗಿಯೇ ಇದ್ದ. ಆ ಸಂದರ್ಭದಲ್ಲಿ ತನ್ನ ಪತ್ನಿಗೆ ಪತ್ರ ಬರೆಯಬೇಕು ಎಂಬ ಬಯಕೆಯನ್ನು ಆತ ವ್ಯಕ್ತಪಡಿಸಿದ್ದ. ಜೈಲಿನ ವರಿಷ್ಠಾಧಿಕಾರಿ ಪೆನ್ನು ಹಾಗೂ ಕಾಗದ ನೀಡಿದರು' ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಅಫ್ಜಲ್ ಗುರು ಬರೆದಿರುವ ಪತ್ರ ಇನ್ನೂ ನಮಗೆ ತಲುಪಿಲ್ಲ' ಎಂದು ಸೊಪೊರದಲ್ಲಿರುವ ಗುರು ಸಂಬಂಧಿ ಯಾಸಿನ್ ಗುರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.