ADVERTISEMENT

ಮಹಿಳೆಯರಿಗೆಂದೇ 2 ದಿನ ನಿಗದಿ ಮಾಡಬಹುದು-ಹೈಕೋರ್ಟ್‌ಗೆ ಅಭಿಪ್ರಾಯ ತಿಳಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 3:30 IST
Last Updated 24 ನವೆಂಬರ್ 2018, 3:30 IST
   

ಕೊಚ್ಚಿ:ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತು ವಾದ–ವಿವಾದ, ಪರ–ವಿರೋಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ತೀರ್ಪನ್ನು ಮರು ಪರಿಶೀಲಿಸುವಂತೆ ಸುರ್ಪೀಂ ಕೋರ್ಟ್‌ಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಮಹಿಳೆಯರಿಗೆಂದೇ ಪ್ರತ್ಯೇಕ ದಿನ ನಿಗದಿ ಮಾಡಬಹುದೆಂದು ಕೇರಳ ಸರ್ಕಾರ ಹೇಳಿದೆ.

ಶಬರಿಮಲೆ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆಂದೇ ಪ್ರತ್ಯೇಕವಾಗಿ ಎರಡು ದಿನಗಳನ್ನು ನಿಗದಿಪಡಿಸಬಹುದು ಎಂದು ಕೇರಳ ಸರ್ಕಾರವು ಶುಕ್ರವಾರ ಹೈಕೋರ್ಟ್‌ಗೆ ತನ್ನ ಅಭಿಪ್ರಾಯ ತಿಳಿಸಿದೆ.

‘ಮಹಿಳೆಯರು ದೇಗುಲ ಪ್ರವೇಶಿಸಲು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ ದೇವಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಕೆಲವು ರಾಜಕೀಯ ಸಂಘಟನೆಗಳು ಬೆದರಿಕೆ ಹಾಕಿವೆ. ಹೀಗಾಗಿ ನಮಗೆ ಭದ್ರತೆ ಕೊಡಿ’ ಎಂದು ನಾಲ್ವರು ಮಹಿಳೆಯರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿತ್ತು.

ADVERTISEMENT

ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೇ ಪ್ರತ್ಯೇಕ ದಿನವನ್ನು ಮೀಸಲಿರಿಸಿದರೆ ಸಮಸ್ಯೆ ಬಗೆಹರಿಯಬಹುದು. ಈ ಬಗ್ಗೆ ತಿರುವಾಂಕೂರು ದೇವಸ್ವ ಮಂಡಳಿಯ ಜತೆ ಮಾತನಾಡುತ್ತೇವೆ ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ರೇಷ್ಮಾ ನಿಶಾಂತ್, ಶನಿಲಾ ಸಜೇಶ್, ವಿ.ಎಸ್‌.ಧನ್ಯಾ ಮತ್ತು ಎಂ.ಸೂರಯಾ ಅವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಎ.ಕೆ. ಜಯಸಂಕರನ್ ನಂಬಿಯಾರ್ ಅವರನ್ನೊಳಗೊಂಡ ವಿಭಾಗೀಯಪೀಠದ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರ, ಮಹಿಳೆಯರು ಮಾಡಿದ ಸಲಹೆಯ ಮೇರೆಗೆ ತೀರ್ಥಯಾತ್ರೆ ಕಾಲದಲ್ಲಿ ದೇವಾಲಯದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಎರಡು ದಿನಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಬಹುದುಎಂದು ನ್ಯಾಯಾಲಯಕ್ಕೆ ತಿಳಿಸಿತು.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.