ADVERTISEMENT

ನವೀಕರಣಗೊಳ್ಳುತ್ತಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವು

ಪಿಟಿಐ
Published 25 ಏಪ್ರಿಲ್ 2022, 16:01 IST
Last Updated 25 ಏಪ್ರಿಲ್ 2022, 16:01 IST
ನವೀಕರಣಗೊಳ್ಳುತ್ತಿದ್ದ ಕಟ್ಟಡ ಕುಸಿತಗೊಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ
ನವೀಕರಣಗೊಳ್ಳುತ್ತಿದ್ದ ಕಟ್ಟಡ ಕುಸಿತಗೊಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ   

ನವದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಸೋಮವಾರ ನವೀಕರಣಗೊಳ್ಳುತ್ತಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಮೂವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆಯುವ ವೇಳೆ ಶಿಥಿಲಗೊಂಡಿದ್ದ ಕಟ್ಟಡದ ಹೊರಗಿದ್ದ ಮತ್ತೊಬ್ಬ ಕಾರ್ಮಿಕ ಅಪಾಯದಿಂದ ಪಾರಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಸ್‌ಡಿಎಂಸಿ) ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ.

ADVERTISEMENT

ಮಧ್ಯಾಹ್ನ 1.25ರ ಸುಮಾರಿಗೆ ದಕ್ಷಿಣ ಕ್ಯಾಂಪಸ್ ಪೊಲೀಸ್ ಠಾಣೆಗೆ ಸತ್ಯ ನಿಕೇತನ ಪ್ರದೇಶದಲ್ಲಿ ಕಟ್ಟಡ ಕುಸಿದಿರುವ ಬಗ್ಗೆ ಕರೆಬಂತು. ಕೂಡಲೇ ನೈಋತ್ಯ ಜಿಲ್ಲಾ ಪೊಲೀಸರು ದೆಹಲಿ ಅಗ್ನಿಶಾಮಕ ಸೇವೆಗಳು ಮತ್ತು ಎನ್‌ಡಿಆರ್‌ಎಫ್‌ನೊಂದಿಗೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ಕಟ್ಟಡದಡಿ ಸಿಲುಕಿದ್ದ ಎಲ್ಲ ಐದು ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರನ್ನು ಬಿಲಾಲ್ ಮತ್ತು ನಸೀಮ್ ಎಂದು ಗುರುತಿಸಲಾಗಿದ್ದು, ಎಂಡಿ ಫಿರ್ದೌಸ್, ಅಸ್ಲಾಂ, ಸರ್ಫರಾಜ್ ಮತ್ತು ಮುಸಾಹಿದ್ ಗಾಯಗೊಂಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ.

ಈ ಘಟನೆ ದುರದೃಷ್ಟಕರ ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಿಲ್ಲಾಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿಯನ್ನು ಪಡೆಯುತ್ತಿದ್ದೇನೆ' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.