ADVERTISEMENT

2021ರ ಗ್ಲೋಬಲ್‌ ಟೀಚರ್‌ ಪ್ರಶಸ್ತಿ ಪಟ್ಟಿಯಲ್ಲಿ ಇಬ್ಬರು ಭಾರತೀಯರು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 14:24 IST
Last Updated 9 ಸೆಪ್ಟೆಂಬರ್ 2021, 14:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಬಿಹಾರದ ಭಾಗಲ್ಪುರದ ಗಣಿತ ಶಿಕ್ಷಕ ಸತ್ಯಂ ಮಿಶ್ರ ಮತ್ತು ಹೈದರಾಬಾದಿನ ಸಮಾಜ, ಇಂಗ್ಲಿಷ್ ಮತ್ತು ಗಣಿತ ಶಿಕ್ಷಕಿ ಮೇಘನಾ ಮುಸುನುರಿ ಅವರು ಈ ವರ್ಷದ ‘ಗ್ಲೋಬಲ್‌ ಟೀಚರ್‌ ಪ್ರೈಜ್‌’ಗೆ ಪಟ್ಟಿ ಮಾಡಿರುವ ಅಗ್ರ 50 ಶಿಕ್ಷಕರಲ್ಲಿ ಸ್ಥಾನ ಪಡೆದಿದ್ದಾರೆ.

ವಾರ್ಕಿ ಫೌಂಡೇಷನ್ ಯುನೆಸ್ಕೊ ಸಹಭಾಗಿತ್ವದಲ್ಲಿ ಈ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಯ ಜತೆಗೆ 10 ಲಕ್ಷ ಡಾಲರ್‌ (ಸುಮಾರು ₹7.37 ಕೋಟಿ) ನಗದು ಕೂಡ ಇದೆ. 121 ದೇಶಗಳಿಂದ 8,000 ನಾಮನಿರ್ದೇಶನಗಳು ಮತ್ತು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಶಿಕ್ಷಕ ಮಿಶ್ರಾ ಅವರು, ಮಕ್ಕಳು ಜಗತ್ತನ್ನು ನೋಡುವ ದೃಷ್ಟಿಕೋನ ಬದಲಿಸುವ ಸಂಕಲ್ಪ ಮಾಡಿದವರು. ವಿದ್ಯಾರ್ಥಿಗಳು ವಿಷಯವನ್ನು ಲವಲವಿಕೆಯಿಂದ ಕಲಿಯಲು ಮನಮುಟ್ಟುವಂತಹ ಬಹುವಿಧದ ತಂತ್ರಗಳನ್ನು ಬಳಸುವುದರಲ್ಲಿ ಹೆಸರುವಾಸಿ.

ADVERTISEMENT

‌ಪ್ರಶಸ್ತಿ ಪಟ್ಟಿಯಲ್ಲಿರುವ ಎರಡನೇ ಭಾರತೀಯ ಶಿಕ್ಷಕಿಯಾದ ಮೇಘನಾ ಅವರು ಉದ್ಯಮಿ, ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ಫೌಂಟೇನ್‌ಹೆಡ್‌ ಗ್ಲೋಬಲ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಸ್ಥಾಪಕಿ ಮತ್ತು ಅಧ್ಯಕ್ಷೆ ಕೂಡ. ಮಹಿಳೆಯರು ಉದ್ಯಮಿಗಳಾಗಲು ಮಾರ್ಗದರ್ಶನ ಸಹ ನೀಡುತ್ತಿದ್ದಾರೆ.

ಗ್ಲೋಬಲ್‌ ಸ್ಟೂಡೆಂಟ್‌ ಪ್ರೈಜ್‌ ಪಟ್ಟಿಯಲ್ಲಿ ನಾಲ್ವರು ಭಾರತೀಯರು:

ಗ್ಲೋಬಲ್‌ ಸ್ಟೂಡೆಂಟ್‌ ಪ್ರೈಜ್‌ಗೆ ಆಯ್ಕೆ ಮಾಡಿರುವ ಅಗ್ರ 50 ಮಂದಿಯ ಪಟ್ಟಿಯಲ್ಲಿ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಆರ್ಕಿಟೆಕ್ಚರ್ ವಿದ್ಯಾರ್ಥಿ, 21 ವರ್ಷದ ಕೈಫ್ ಅಲಿಯೊಂದಿಗೆ ನಾಲ್ವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಅಹ್ಮದಾಬಾದ್‌ನ ಎಂಬಿಎ ವಿದ್ಯಾರ್ಥಿ, 23 ವರ್ಷದಆಯುಷ್ ಗುಪ್ತಾ, ಜಾರ್ಖಂಡ್‌ನ 17 ವರ್ಷದ ವಿದ್ಯಾರ್ಥಿನಿ ಸೀಮಾ ಕುಮಾರಿ ಹಾಗೂ ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾಲಯದ 24 ವರ್ಷದ ವಿದ್ಯಾರ್ಥಿ ವಿಪಿನ್ ಕುಮಾರ್ ಶರ್ಮಾ ಅಗ್ರ 50 ಮಂದಿಯ ಪಟ್ಟಿಯಲ್ಲಿದ್ದಾರೆ. ಈ ಬಾರಿ ಗ್ಲೋಬಲ್‌ ಸ್ಟೂಡೆಂಟ್‌ ಪ್ರೈಜ್‌ ಮೊತ್ತವನ್ನು ದ್ವಿಗುಣಗೊಳಿಸಲಾಗಿದ್ದು, ಸುಮಾರು ₹7.37 ಕೋಟಿಗೆ ಏರಿಸಲಾಗಿದೆ.

ಮುಂದಿನ ತಿಂಗಳು ಎರಡೂ ಪ್ರಶಸ್ತಿಗಳ ಅಗ್ರ 10 ಮಂದಿಯ ಹೆಸರನ್ನು ಪ್ರಕಟಿಸಲಾಗುತ್ತಿದೆ. ಪ್ರಶಸ್ತಿ ವಿಜೇತರನ್ನು ಕ್ರಮವಾಗಿ ಗ್ಲೋಬಲ್ ಟೀಚರ್ ಪ್ರೈಜ್ ಅಕಾಡೆಮಿ ಮತ್ತು ಗ್ಲೋಬಲ್ ಸ್ಟೂಡೆಂಟ್ ಪ್ರೈಜ್ ಅಕಾಡೆಮಿ ಆಯ್ಕೆ ಮಾಡಲಿವೆ. ನವೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕಳೆದ ವರ್ಷಗ್ಲೋಬಲ್ ಟೀಚರ್ ಪ್ರೈಜ್ ಪ್ರಶಸ್ತಿ ಮಹಾರಾಷ್ಟ್ರದ ರಂಜಿತ್‌ ಸಿನ್ಹಾ ದಿಸಳೆ ಅವರಿಗೆ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.