ADVERTISEMENT

ಪೊಲೀಸರ ನಿರ್ಲಕ್ಷ್ಯ ಖಂಡಿಸಿ 20 ಮುಸ್ಲಿಮರು ಮತಾಂತರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 18:15 IST
Last Updated 2 ಅಕ್ಟೋಬರ್ 2018, 18:15 IST

ಲಖನೌ: ಹತ್ಯೆ ಪ್ರಕರಣದ ತನಿಖೆ ಬಗ್ಗೆ ಪೊಲೀಸರ ನಿಷ್ಕ್ರಿಯತೆ ಖಂಡಿಸಿ ಉತ್ತರಪ್ರದೇಶದ ಬಘಪತ್‌ ಜಿಲ್ಲೆಯ ಮುಸ್ಲಿಂ ಕುಟುಂಬವೊಂದರ 20 ಸದಸ್ಯರು ಮಂಗಳವಾರ ಸಾಮೂಹಿಕವಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.

ಇದೇ ಜಿಲ್ಲೆಯ ಬದರ್ಖಾ ಗ್ರಾಮದ ಶಿವಾ ದೇವಾಲಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಈ 20 ಮಂದಿ ಪಾಲ್ಗೊಂಡಿದ್ದರು. ಪೂಜಾರಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಹಿಂದೂಗಳ ಹೆಸರನ್ನು ನಾಮಕರಣ ಮಾಡಲಾಯಿತು.

‘ಎಲ್ಲರೂ ತಮ್ಮ ಸ್ವ ಇಚ್ಛೆಯಿಂದ ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಅವರ ಮೇಲೆ ಯಾರೂ ಒತ್ತಡ ಹೇರಿರಲಿಲ್ಲ’ ಎಂದು ಜಿಲ್ಲಾಡಳಿತದ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಸ್ಥಳೀಯ ಪೊಲೀಸರ ಕಾರ್ಯವೈಖರಿ ಬಗ್ಗೆ ಇವರಿಗೆ ತೀವ್ರವಾದ ಅಸಮಾಧಾನವಿತ್ತು. ಕುಟುಂಬದ ಸದಸ್ಯರೊಬ್ಬರ ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದರು ಎಂದು ಆರೋಪಿಸಲಾಗಿದೆ.

‘ನನ್ನ ಪುತ್ರ ಗುಲ್ಜಾರ್‌ನನ್ನು ಮುಸ್ಲಿಂ ಸಮುದಾಯದ ಕೆಲವರು ಹತ್ಯೆ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಮುಚ್ಚಿ ಹಾಕಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಮತ್ತು ನಮ್ಮ ಸಮುದಾಯದ ಮುಖಂಡರಿಗೆ ನಾವು ಹಲವು ಮನವಿಗಳನ್ನು ಸಲ್ಲಿಸಿದ್ದೇವೆ. ಆದರೆ, ಯಾವುದೇ ಫಲ ನೀಡಿಲ್ಲ’ ಎಂದು ಅಖ್ತರ್‌ ಅಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.