ADVERTISEMENT

2001 ಸಂಸತ್ ದಾಳಿ: ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ, ರಾಷ್ಟ್ರಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2021, 5:12 IST
Last Updated 13 ಡಿಸೆಂಬರ್ 2021, 5:12 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದಹೆಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2001ರ ಸಂಸತ್ ದಾಳಿಯ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಸಂಸತ್ ಭವನದ ಮೇಲೆ ದಾಳಿ ನಡೆದು ಇಂದಿಗೆ 20 ವರ್ಷಗಳು ಕಳೆದಿವೆ. ಉಗ್ರರ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, '2001ರಲ್ಲಿ ಭೀಕರ ಭಯೋತ್ಪಾದನೆ ದಾಳಿಯಿಂದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸಂಸತ್ತನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿರುವ ಧೀರ ಭದ್ರತಾ ಸಿಬ್ಬಂದಿಗೆ ನನ್ನ ಗೌರವ ನಮನ ಸಲ್ಲಿಸುತ್ತೇನೆ. ಅವರ ಬಲಿದಾನಕ್ಕಾಗಿ ದೇಶವು ಸದಾ ಕೃತಜ್ಞವಾಗಿರುತ್ತದೆ' ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. '2001ರಲ್ಲಿ ಸಂಸತ್ ದಾಳಿಯ ಸಂದರ್ಭದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲ ಭದ್ರತಾ ಸಿಬ್ಬಂದಿಗೆ ನನ್ನ ನಮನ ಸಲ್ಲಿಸುತ್ತೇನೆ. ಅವರ ಸೇವೆ ಮತ್ತು ಪರಮ ತ್ಯಾಗ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಪ್ರೇರಣೆ ನೀಡುತ್ತಲೇ ಇದೆ ' ಎಂದು ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಕೂಡಾ ಭದ್ರತಾ ಸಿಬ್ಬಂದಿಯ ಅಪ್ರತಿಮ ಶೌರ್ಯ ಮತ್ತು ಅಮರ ತ್ಯಾಗ ಯಾವಾಗಲೂ ರಾಷ್ಟ್ರದ ಸೇವೆ ಮಾಡಲು ನಮಗೆ ಸ್ಫೂರ್ತಿ ತುಂಬಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಾ, 'ಭಾರತದ ಪ್ರಜಾಪ್ರಭುತ್ವ ದೇಗುಲವಾದ ಸಂಸತ್ ಭವನದ ಮೇಲಿನ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ರಾಷ್ಟ್ರದ ಹೆಮ್ಮೆಯನ್ನು ರಕ್ಷಿಸಲು ಎಲ್ಲವನ್ನು ಬಲಿದಾನ ಮಾಡಿದ ಧೀರ ಭದ್ರತಾ ಪಡೆಗಳ ಧೈರ್ಯ ಹಾಗೂ ಶೌರ್ಯಕ್ಕೆ ನನ್ನ ನಮನಗಳು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.