ಇಂದೋರ್ (ಮಧ್ಯ ಪ್ರದೇಶ): ಇಂದೋರ್ ನಗರದ ಬಲೇಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ದುರಂತ ಪ್ರಕರಣದಲ್ಲಿ ದೇವಾಲಯವನ್ನು ನಿರ್ವಹಿಸುತ್ತಿದ್ದ ಟ್ರಸ್ಟ್‌ನ ಇಬ್ಬರು ಹಿರಿಯ ಪದಾಧಿಕಾರಿಗಳನ್ನು ನಗರ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಬಲೇಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಸೇವಾರಾಮ್ ಗಲಾನಿ ಮತ್ತು ಕಾರ್ಯದರ್ಶಿ ಮುರಳಿ ಕುಮಾರ್ ಸಬ್ನಾನಿ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಗುರುವಾರ ಖುಲಾಸೆಗೊಳಿಸಿದ್ದಾರೆ ಎಂದು ವಕೀಲ ರಾಘವೇಂದ್ರ ಸಿಂಗ್ ಬೈಸ್ ತಿಳಿಸಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ನನ್ನ ಇಬ್ಬರೂ ಕಕ್ಷಿದಾರರನ್ನು ಖುಲಾಸೆಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಕೆಲವು ಸರ್ಕಾರಿ ಅಧಿಕಾರಿಗಳು ಸೇರಿದಂತೆ 33 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿತ್ತು. ಘಟನೆಗೆ ಸಂಬಂಧಿಸಿದ ಮೆಟ್ಟಿಲುಬಾವಿ ಸರ್ಕಾರಿ ದಾಖಲೆಗಳಲ್ಲಿ ದಾಖಲಾಗಿಲ್ಲ ಎಂದು ಇಂದೋರ್ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಬಲೇಶ್ವರ್ ಮಹಾದೇವ್ ಜಲೇಲಾಲ್ ದೇವಾಲಯದ ಹಳೆಯ ಮೆಟ್ಟಿಲುಬಾವಿಯ ಮೇಲೆ ಚಾವಣಿ ನಿರ್ಮಿಸಲಾಗಿತ್ತು. ರಾಮನವಮಿ ಆಚರಣೆ ವೇಳೆ ದೇವಸ್ಥಾನದಲ್ಲಿವ ಬಾವಿಯಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರ ದಂಡು ಜಮಾಯಿಸಿತ್ತು. ಈ ವೇಳೆ ನಾಲ್ಕು ದಶಕಗಳಷ್ಟು ಹಳೆಯ ಮೆಟ್ಟಿಲು ಕುಸಿದಿದೆ. ಪರಿಣಾಮ ಅದರ ಮೇಲೆ ನಿಂತಿದ್ದ ಹಲವರು ಬಾವಿಗೆ ಬಿದ್ದಿದ್ದರು. ಇವರಲ್ಲಿ 21 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 36 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.