ಚೆನ್ನೈ: ಬರಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ವಿಭಿನ್ನವಾಗಿರಲಿದ್ದು ಈ ಸಲ ಡಿಎಂಕೆ ಮತ್ತು ಟಿವಿಕೆ ಪಕ್ಷಗಳ ಮಧ್ಯೆ ಮಾತ್ರ ಸ್ಪರ್ಧೆ ಇರಲಿದೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಹೇಳಿದ್ದಾರೆ.
ಇಲ್ಲಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಡಿಎಂಕೆ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.
ಡಿಎಂಕೆ ವಂಶಪಾರಂಪರ್ಯ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದ ಅವರು ರಾಜ್ಯದಲ್ಲಿ ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು ಕೇಂದ್ರ ಸರ್ಕಾರ ತ್ರಿಭಾಷ ನೀತಿ ಮತ್ತು ಕ್ಷೇತ್ರ ಮರುವಿಂಗಡಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ನಮ್ಮಿಂದ ಜಿಎಸ್‌ಟಿ ಸಂಗ್ರಹ ಮಾಡಿಕೊಂಡು ಶಿಕ್ಷಣ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ನೀವು ಯಾವುದೇ ಅನುದಾನ ನೀಡುತ್ತಿಲ್ಲ, ಪ್ರಧಾನಿ ಮೋದಿ ಅವರೇ, ಇನ್ನು ಮುಂದೆ ರಾಜಕಾರಣಕ್ಕಾಗಿ ತಮಿಳುನಾಡನ್ನು ಮರೆತುಬಿಡಿ ಎಂದು ವಿಜಯ್ ಹೇಳಿದರು.
2026ರ ಚುನಾವಣೆಯಲ್ಲಿ ಟಿವಿಕೆ ಮತ್ತು ಡಿಎಂಕೆ ಪಕ್ಷಗಳ ಸ್ಪರ್ಧೆ ಮಾತ್ರ ಕಾಣುತ್ತದೆ. ಬಿಜೆಪಿ ಮತ್ತು ಎಐಎಡಿಎಂ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದ ಪಕ್ಷಗಳು ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.