ಕೋಹಿಮಾ: ನಾಗಾಲ್ಯಾಂಡ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ನಾಗಾ ಪೀಪಲ್ಸ್ ಫ್ರಂಟ್‌ನ (ಎನ್‌ಪಿಎಫ್) 25 ಶಾಸಕರ ಪೈಕಿ 21 ಮಂದಿ ಶುಕ್ರವಾರ ‘ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ’ (ಎನ್‌ಡಿಪಿಪಿ)ಗೆ ಸೇರ್ಪಡೆಗೊಂಡಿದ್ದಾರೆ.
ನಾಗಲ್ಯಾಂಡ್‌ನಲ್ಲಿ ಕಳೆದ ವರ್ಷ ವಿರೋಧಪಕ್ಷ ಮುಕ್ತ, ಸರ್ವಪಕ್ಷಗಳ ಸರ್ಕಾರ(ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್–ಯುಡಿಎ) ರಚನೆಯಾಗಿತ್ತು. ಅದರಲ್ಲಿ ಎನ್‌ಪಿಎಫ್ ಮತ್ತು ಎನ್‌ಡಿಪಿಪಿ ಕೂಡ ಪಾಲುದಾರ ಪಕ್ಷಗಳಾಗಿವೆ.
ಕೇಂದ್ರ ಸರ್ಕಾರ ಮತ್ತು ನಾಗಾ ಸಂಘಟನೆಗಳು ಹಾಗೂ ಇತರ ಗುಂಪುಗಳ ನಡುವಿನ ‘ನಾಗಾ ರಾಜಕೀಯ ಸಮಸ್ಯೆ’ಯನ್ನು ಪರಿಹರಿಸಿಕೊಳ್ಳಲು ಯುಡಿಎ ಅಡಿಯಲ್ಲಿ ಸರ್ವಪಕ್ಷ ಸರ್ಕಾರವನ್ನು ರಚನೆ ಮಾಡಲಾಗಿತ್ತು.
12 ಶಾಸಕರನ್ನು ಹೊಂದಿರುವ ಬಿಜೆಪಿಯೂ ಯುಡಿಎನಲ್ಲಿ ಪ್ರಮುಖ ಪಕ್ಷವಾಗಿದೆ. ಎನ್‌ಪಿಎಫ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಟಿ. ಆರ್. ಝೆಲಿಯಾಂಗ್ ಮೈತ್ರಿಕೂಟದ ಅಧ್ಯಕ್ಷರಾಗಿದ್ದಾರೆ.
ಸದ್ಯ, 21 ಎನ್‌ಪಿಎಫ್ ಶಾಸಕರ ಸೇರ್ಪಡೆಯೊಂದಿಗೆ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಪಿಪಿಯ ಬಲ 42ಕ್ಕೆ ಏರಿದೆ.
ಎನ್‌ಡಿಪಿಪಿಗೆ ‘ವಿಲೀನ’ವಾಗುವ ಪ್ರಸ್ತಾವನ್ನು21 ಶಾಸಕರು ಸ್ಪೀಕರ್ ಸೇರಿಂಗೈನ್ ಲೋಕನ್ ಕುಮಾರ್ ಅವರಿಗೆ ನೀಡಿದ್ದಾರೆ. ಸ್ಪೀಕರ್ ಕೂಡ ಈ ಪ್ರಸ್ತಾವವನ್ನು ಸ್ವೀಕರಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಎನ್‌ಪಿಎಫ್‌ನ ಅಧ್ಯಕ್ಷಶುರ್ಹೋಜೆಲಿ ಲೀಜಿಯೆಟ್ಸು ಗುರುವಾರ ಘೋಷಿಸಿದ್ದರು. ಇದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.