ನವದೆಹಲಿ: ಕೋವಿಡ್ ಮೊದಲನೇ ಅಲೆಯಿಂದ ಲಾಕ್‌ಡೌನ್ ಹೇರಿದ್ದ ಮಾರ್ಚ್–ಜೂನ್ ಅವಧಿಯಲ್ಲಿ ದೇಶದ 9 ಪ್ರಮುಖ ಕೃಷಿಯೇತರ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಸಮೀಕ್ಷೆ ತಿಳಿಸಿದೆ. ಉದ್ಯೋಗ ಕಳೆದುಕೊಂಡವರ ಪೈಕಿ ತಯಾರಿಕಾ ವಲಯದವರ ಪಾಲು ಶೇ 60ರಷ್ಟು. ತಯಾರಿಕಾ ವಲಯವು ಅತಿಹೆಚ್ಚು ಅಂದರೆ14.2 ಲಕ್ಷ ಉದ್ಯೋಗಿಗಳನ್ನು ಕಳೆದುಕೊಂಡಿದೆ.
ಸಮೀಕ್ಷೆ ನಡೆಸಿದ ಅವಧಿಯಲ್ಲಿ 9 ವಲಯಗಳಲ್ಲಿ 3.07 ಕೋಟಿ ಜನರು ಕೆಲಸ ಮಾಡುತ್ತಿದ್ದರು. ಈ ಪೈಕಿ 2.17 ಕೋಟಿ ಪುರುಷರು ಮತ್ತು 90 ಲಕ್ಷ ಮಹಿಳೆಯರಿದ್ದರು. ಆದರೆ ಲಾಕ್‌ಡೌನ್ ಬಳಿಕ ಅಂದರೆಜೂನ್ 1ರ ಮಾಹಿತಿ ಪ್ರಕಾರ, 2.01 ಕೋಟಿ ಪುರುಷರು ಮತ್ತು 83.3 ಲಕ್ಷ ಮಹಿಳೆಯರು ಕೆಲಸ ಮಾಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ತ್ರೈಮಾಸಿಕ ಉದ್ಯೋಗ ಸಮೀಕ್ಷೆ (ಕ್ಯೂಇಎಸ್) ತಿಳಿಸಿದೆ.
ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರು ಏಪ್ರಿಲ್–ಜೂನ್ 2021ರ ಸಮೀಕ್ಷಾ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದರು. ಕಳೆದ ವರ್ಷ ವಿಧಿಸಿದ್ದ ಮೊದಲ ದೇಶವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಸಂಸ್ಥೆಗಳ ಕಾರ್ಯಾಚರಣೆ ಸ್ಥಿತಿ, ಉದ್ಯೋಗದ ಸ್ಥಿತಿ ಮತ್ತು ವೇತನದ ಮೇಲೆ ಉಂಟಾದ ಪರಿಣಾಮದ ದತ್ತಾಂಶವನ್ನು ಸಂಗ್ರಹಿಸಲು ಈ ಸಮೀಕ್ಷೆ ಪ್ರಯತ್ನಿಸಿದೆ ಎಂದು ವರದಿ ತಿಳಿಸಿದೆ.
ಈ ಅವಧಿಯಲ್ಲಿ ಶೇ 16.6ರಷ್ಟು ಉದ್ಯೋಗಿಗಳ ವೇತನಕ್ಕೆ ಕತ್ತರಿ ಬಿದ್ದಿದ್ದರೆ, ಶೇ 2.7ರಷ್ಟು ಉದ್ಯೋಗಿಗಳಿಗೆ ಸಂಬಳವನ್ನೇ ನೀಡಲಾಗಿಲ್ಲ. ನಿರ್ಮಾಣ ಮತ್ತು ವಸತಿ–ರೆಸ್ಟೋರೆಂಟ್ ವಲಯದವರಿಗೇ ಹೆಚ್ಚು ತೊಂದರೆ ಆಗಿದೆ. ಒಂಬತ್ತು ಕ್ಷೇತ್ರಗಳಲ್ಲಿ ಶೇ 34.2ರಷ್ಟು ಸಂಸ್ಥೆಗಳು ಮಾತ್ರ ಲಾಕ್‌ಡೌನ್ ಅವಧಿಯಲ್ಲಿ ಬಾಗಿಲು ತೆರೆದಿದ್ದವು.
ಈ ಒಂಬತ್ತು ವಲಯಗಳಲ್ಲಿ ಸುಮಾರು ಶೇ 80.7ರಷ್ಟು ಉದ್ಯೋಗಿಗಳು ಸಂಪೂರ್ಣ ವೇತನವನ್ನು ಪಡೆದಿದ್ದಾರೆ. ಈ ಪೈಕಿ ಆರೋಗ್ಯದಲ್ಲಿ (ಶೇ 90.7) ಹಣಕಾಸು ಸೇವೆಗಳಲ್ಲಿ (ಶೇ 90.4) ಮೊದಲಿಗಿವೆ.ನಿರ್ಮಾಣದಲ್ಲಿ ಶೇ 66ರಷ್ಟು ಕೆಲಸಗಾರರು ಮತ್ತು ವಸತಿ–ರೆಸ್ಟೋರೆಂಟ್ ವಲಯದ ಶೇ 66.2ರಷ್ಟು ಕೆಲಸಗಾರರುಪೂರ್ಣ ವೇತನ ಪಡೆದಿದ್ದಾರೆ. ಈ ಎರಡೂ ಕ್ಷೇತ್ರಗಳು ಕೋವಿಡ್‌ನಿಂದ ತೀವ್ರ ನಷ್ಟ ಅನುಭವಿಸಿವೆ.
ನಿರ್ಮಾಣ ವಲಯದಲ್ಲಿಯೇ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಯಾವುದೇ ವೇತನವನ್ನು ಪಡೆಯಲಿಲ್ಲ. ಶೇ 6.7ರಷ್ಟು ಜನರು ಲಾಕ್‌ಡೌನ್ ಸಮಯದಲ್ಲಿ ಒಂದು ಪೈಸೆ ಕೂಡ ಪಡೆದಿಲ್ಲ. ವಸತಿ–ರೆಸ್ಟೋರೆಂಟ್ ವಲಯದಲ್ಲಿ ಶೇ 4.9ರಷ್ಟು ಉದ್ಯೋಗಿಗಳು ಯಾವುದೇ ವೇತನ ಪಡೆದಿಲ್ಲ.
ಲಾಕ್‌ಡೌನ್ ಅವಧಿಯಲ್ಲಿ ಅತಿಹೆಚ್ಚಾಗಿ ಕಾರ್ಯಾಚರಣೆಯಲ್ಲಿದ್ದ ಕ್ಷೇತ್ರಗಳಲ್ಲಿ ಆರೋಗ್ಯ (ಶೇ 88.9) ವಲಯ ಮುಂಚೂಣಿಯಲ್ಲಿದೆ. ನಂತರ ಸ್ಥಾನದಲ್ಲಿ ಹಣಕಾಸು ಸೇವೆ (ಶೇ 71.6) ಇದೆ. ಕಡಿಮೆ ಕಾರ್ಯಾಚರಣೆ ನಡೆಸಿದ ಕ್ಷೇತ್ರಗಳಲ್ಲಿ ಶಿಕ್ಷಣ (ಶೇ 76.5) ಮತ್ತು ವಸತಿ–ರೆಸ್ಟೋರೆಂಟ್ (ಶೇ 72) ಕ್ಷೇತ್ರಗಳಿವೆ.
ಉದ್ಯೋಗದ ವಿಚಾರಕ್ಕೆ ಬಂದರೆ, ಲಾಕ್‌ಡೌನ್ ಸಮಯದಲ್ಲಿ 9 ವಲಯಗಳಲ್ಲಿನ ಶೇ 26.7ರಷ್ಟು ಸಂಸ್ಥೆಗಳಲ್ಲಿ ಉದ್ಯೋಗದಲ್ಲಿ ಇಳಿಕೆ ಕಂಡುಬಂದಿದೆ.ತಯಾರಿಕೆ (ಶೇ 38.1), ನಿರ್ಮಾಣ (ಶೇ 34.5),ವಸತಿ ಮತ್ತು ರೆಸ್ಟೋರೆಂಟ್ (ಶೇ 34.3),ಐಟಿ/ಬಿಪಿಒ (ಶೇ 33.5) ಕ್ಷೇತ್ರಗಳು ಇಳಿಕೆ ದಾಖಲಿಸಿವೆ. ಲಾಕ್‌ಡೌನ್ ನಿರ್ಬಂಧಗಳ ಪ್ರಭಾವವಿದ್ದರೂ, ಹಣಕಾಸು ಸೇವೆ (ಶೇ84.5) ಹಾಗೂ ಶಿಕ್ಷಣ (ಶೇ 78.4) ಕ್ಷೇತ್ರಗಳು ಹೆಚ್ಚು ಪರಿಣಾಮಕ್ಕೆ ಒಳಗಾಗಿಲ್ಲ. ಲಾಕ್‌ಡೌನ್ ಅವಧಿಯಲ್ಲೂ ಉದ್ಯೋಗದಲ್ಲಿ ಏರಿಕೆ ದಾಖಲಿಸಿದ್ದು ಆರೋಗ್ಯ ಕ್ಷೇತ್ರ. ಇಲ್ಲಿ ಶೇ 7ರಷ್ಟು ಉದ್ಯೋಗ ದಾಖಲಾಗಿದೆ.
ಸ್ವ ಉದ್ಯೋಗಿ, ಮಹಿಳೆ ಮತ್ತು ಶಿಕ್ಷಣ
3.08 ಕೋಟಿ ಕಾರ್ಮಿಕರಲ್ಲಿ ಸ್ವಯಂ ಉದ್ಯೋಗಿಗಳ ಪ್ರಮಾಣ 1.6ರಷ್ಟು ಮಾತ್ರ. ಈ ಪೈಕಿ ಮಹಿಳೆಯರ ಭಾಗವಹಿಸುವಿಕೆ ತುಂಬಾ (ಶೇ 11.4) ಕಡಿಮೆಯಿದೆ.ಹೆಚ್ಚಿನ ಸಂಖ್ಯೆಯ ಸ್ವಯಂ ಉದ್ಯೋಗಿಗಳು ವಸತಿ ಮತ್ತು ರೆಸ್ಟೋರೆಂಟ್‌ಗಳಲ್ಲಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳನ್ನು ಪರಿಗಣಿಸಿದಾಗ, ಶೇ 32.7ರಷ್ಟು ಕೆಲಸಗಾರರು ಪ್ರೌಢಶಿಕ್ಷಣ ಮುಗಿಸಿದ್ದಾರೆ. ಶೇ 31.1ರಷ್ಟು ಮಂದಿ ಪ್ರೌಢಶಿಕ್ಷಣಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿದ್ದಾರೆ. ಶೇ 30.8ರಷ್ಟು ಕಾರ್ಮಿಕರು ಪದವೀಧರರು ಅಥವಾ ಅದಕ್ಕಿಂತ ಹೆಚ್ಚು ಓದಿಕೊಂಡಿದ್ದಾರೆ. ತಯಾರಿಕೆ (ಶೇ 37.1), ನಿರ್ಮಾಣ ವಲಯಗಳ (ಶೇ 34.3) ಕಾರ್ಮಿಕರು ಪ್ರೌಢಶಿಕ್ಷಣಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿದ್ದಾರೆ. ಪದವಿ ಮತ್ತು ಅದಕ್ಕಿಂತ ಹೆಚ್ಚು ಕಲಿತವರು ಐಟಿ/ಬಿಪಿಒ ಹಾಗೂ ಹಣಕಾಸು ಸೇವೆ ವಲಯದಲ್ಲಿ ಕಂಡುಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.