ADVERTISEMENT

ಸೇನಾ ನೇಮಕಾತಿಗೆ ಮುಗಿಬಿದ್ದ ಕಾಶ್ಮೀರಿ ಯುವಕರು

111 ಹುದ್ದೆಗೆ 2,500 ಮಂದಿ ಭಾಗಿ

ಏಜೆನ್ಸೀಸ್
Published 19 ಫೆಬ್ರುವರಿ 2019, 12:24 IST
Last Updated 19 ಫೆಬ್ರುವರಿ 2019, 12:24 IST
   

ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ): ಭಾರತೀಯ ಸೇನೆ ಮಂಗಳವಾರ ಇಲ್ಲಿ ನಡೆಸಿದ ನೇಮಕಾತಿ ರ್‍ಯಾಲಿಯಲ್ಲಿ ಸುಮಾರು 2500 ಕಾಶ್ಮೀರಿ ಯುವಕರು ಪಾಲ್ಗೊಂಡಿದ್ದರು.

ಖಾಲಿ ಇರುವ 111 ಹುದ್ದೆಗಳಿಗಾಗಿ ಭಾರತೀಯ ಸೇನೆ ನೇಮಕಾತಿ ನಡೆಸಿದೆ. ಫೆಬ್ರುವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿ ಯುವ ಮನಸ್ಸುಗಳಲ್ಲಿ ಕಿಚ್ಚು ಹಚ್ಚಿಸಿದ್ದು, ಈ ಪ್ರಮಾಣದಲ್ಲಿ ಯುವಕರು ನೇಮಕಾತಿಯಲ್ಲಿ ಪಾಲ್ಗೊಳ್ಳಲು ಕಾರಣ ಎನ್ನುತ್ತಾರೆ ಸೇನಾ ಸಿಬ್ಬಂದಿ.

‘ಕಣಿವೆ ಪ್ರದೇಶದಲ್ಲಿ ಯಾವುದೇ ಉದ್ಯೋಗ ಅವಕಾಶಗಳು ನಮಗಿಲ್ಲ. ಹಾಗಾಗಿ ಸೈನ್ಯ ಸೇರಿದರೆ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶವಾದರೂ ದೊರೆಯುತ್ತದೆ ಹಾಗೂ ನಮ್ಮ ಕುಟುಂಬವನ್ನು ರಕ್ಷಿಸಬಹುದು’ ಎಂದು ನೇಮಕಾತಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ನಾವು ಕಾಶ್ಮೀರದಿಂದ ಹೊರಗೆ ಹೋಗಲು ಸಾಧ್ಯವಿಲ್ಲ. ಇದು ನಮಗೊಂದು ಉತ್ತಮ ಅವಕಾಶ. ಇನ್ನೂ ಹೆಚ್ಚಿನ ಹುದ್ದೆಗಳು ನಮಗೆ ದೊರೆಯಲಿ ಎಂದು ಅಪೇಕ್ಷಿಸುತ್ತೇವೆ. ಕಾಶ್ಮೀರಿ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಿಗೆ ನಿಯೋಜಿಸಿದರೆ, ನಾವು ಅಲ್ಲಿನ ಜನರೊಂದಿಗೆ ಮಾತನಾಡಿ ಈಗಿನ ಬಿಕ್ಕಟ್ಟು ಪರಿಹರಿಸಲು ಯತ್ನಿಸುತ್ತೇವೆ’ ಎಂದು ಮತ್ತೊಬ್ಬ ಆಕಾಂಕ್ಷಿ ಹೇಳಿದರು.

ಪುಲ್ವಾಮಾ ದಾಳಿ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಓದುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ವರದಿಗಳು ಬರುತ್ತಿರುವ ನಡುವೆಯೇ ಇದು ನಡೆದಿದೆ. ಸುಮಾರು 300 ಕಾಶ್ಮೀರಿ ವಿದ್ಯಾರ್ಥಿಗಳು ಬೇರೆ ರಾಜ್ಯಗಳಲ್ಲಿ ಓದುತ್ತಿದ್ದು, ದೌರ್ಜನ್ಯ ತಾಳಲಾರದೆ ತಮ್ಮ ಮನೆಗಳಿಗೆ ವಾಪಾಸ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.