ADVERTISEMENT

ಬೋಗಸ್ ಬಿಲ್ ನೀಡಿದ ಜಮ್ಮು –ಕಾಶ್ಮೀರದ 28 ಸಾವಿರ ನೌಕರರ ಮೇಲೆ ಐಟಿ ಕಣ್ಣು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 7:47 IST
Last Updated 4 ಜೂನ್ 2023, 7:47 IST
   

ಶ್ರೀನಗರ: ಜಮ್ಮು –ಕಾಶ್ಮೀರದ 28 ಸಾವಿರ ಸರ್ಕಾರಿ ಉದ್ಯೋಗಿಗಳು ಬೋಗಸ್ ಬಿಲ್‌ ನೀಡಿ ಹಣ ಪಡೆದ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ಪೊಲೀಸ್ ಹಾಗೂ ಅರೆಸೇನಾ ಪಡೆ ಸಿಬ್ಬಂದಿಯೂ ಇರುವುದನ್ನು ಇಲಾಖೆ ಪತ್ತೆ ಮಾಡಿದೆ.

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವ ಸಂದರ್ಭದಲ್ಲಿ ಈ ಬಹುಕೋಟಿ ಹಗರಣವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 2020–21 ಹಾಗೂ 2021–22ನೇ ಸಾಲಿನ ರಿಟರ್ನ್ಸ್‌ಗೆ ಸಂಬಂಧಿಸಿದಂತೆ ಚಾರ್ಟರ್ಡ್‌ ಅಕೌಂಟೆಂಟ್ ಹಾಗೂ 404 ಜನರ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಳೆದ ಆರ್ಥಿಕ ವರ್ಷದಲ್ಲಿ ದಾಖಲಿಸಿಕೊಂಡಿದ್ದರು.‌‌

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯದ ಆದಾಯ ತರಿಗೆ ಇಲಾಖೆಯ ಪ್ರಧಾನ ನಿರ್ದೇಶಕ ಎಂ.ಪಿ.ಸಿಂಗ್ ಅವರು ಪ್ರಕರಣ ದಾಖಲಿಸಲು ಸೂಚಿಸಿದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 2017ರಿಂದ 20202ರವರೆಗೆ ಒಟ್ಟು ₹16.72ಕೋಟಿಯಷ್ಟು ಹಣದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಬಹಳಷ್ಟು ನೌಕರರು ರಿಟರ್ನ್ಸ್‌ ಅನ್ನು ಸಮರ್ಪಕವಾಗಿ ತುಂಬಿಲ್ಲ ಅಥವಾ ತಪ್ಪಾಗಿ ತುಂಬಿರುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಬ್ಬರೂ ಸುಮಾರು ₹4 ಲಕ್ಷ ದಷ್ಟು ಮರುಪಾವತಿಗೆ ಕೋರಿದ್ದು ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆ, ಕೊಟ್ಟಿ ದಾಖಲೆ ಸೃಷ್ಟಿ, ಅಪರಾಧ ಸಂಚು ಆರೋಪಗಳನ್ನು ಮಾಡಲಾಗಿದೆ. ಇದರೊಂದಿಗೆ ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್‌ ಸಂಸ್ಥೆ (ಐಸಿಎಐ) ಆದಾಯ ತರಿಗೆ ಇಲಾಖೆ ಪತ್ರ ಬರೆದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳ ಪರವಾನಗಿಯನ್ನು ರದ್ದುಪಡಿಸಲು ತಿಳಿಸಿದೆ.

ಇಂಧನ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಬ್ಯಾಂಕ್, ವಿಶ್ವವಿದ್ಯಾಲಯ, ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ ಪತ್ರ ಬರೆದಿರುವ ಆದಾಯ ತೆರಿಗೆ ಇಲಾಖೆಯು, ತಪ್ಪಾಗಿರುವ ಐಟಿ ರಿಟರ್ನ್ಸ್‌ಗಳನ್ನು ಕೂಡಲೇ ಸರಿಪಡಿಸಿಕೊಂಡು ಅನಗತ್ಯವಾಗಿ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.