ADVERTISEMENT

2ಜಿ ಹಗರಣ: ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳು ವಜಾ

ಆರೋಪಿಗಳ ವಿರುದ್ಧ ಅರ್ಜಿ ಸಲ್ಲಿಸಲು ಸಿಬಿಐಗೆ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ

ಪಿಟಿಐ
Published 23 ನವೆಂಬರ್ 2020, 14:09 IST
Last Updated 23 ನವೆಂಬರ್ 2020, 14:09 IST
ಎ.ರಾಜಾ
ಎ.ರಾಜಾ   

ನವದೆಹಲಿ: 2ಜಿ ಹಗರಣದಲ್ಲಿ ಖುಲಾಸೆಗೊಂಡಿರುವ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಅರ್ಜಿ ಸಲ್ಲಿಸಲು ಸಿಬಿಐಗೆ ಒಪ್ಪಿಗೆ ನೀಡಿರುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು, ದೆಹಲಿ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಪ್ರಕರಣದಲ್ಲಿ ಸಿಬಿಐ ಸಕಾಲದಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು ನ್ಯಾಯಮೂರ್ತಿ ಬ್ರಿಜೇಶ್‌ ಸೇಥಿ ತಿಳಿಸಿದರು. ತನ್ನ ನ್ಯಾಯಾಲಯದಿಂದ ಈ ಅರ್ಜಿಯನ್ನು ವಜಾಗೊಳಿಸಿದ ಬ್ರಿಜೇಶ್‌ ಅವರು, ‘ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಅನ್ವಯವಾಗುವಂತೆ, ಡಿ.1ರಂದು ಮತ್ತೊಂದು ಪೀಠದ ಮುಂದೆ ಇದು ವಿಚಾರಣೆಗೆ ಬರಲಿದೆ’ ಎಂದರು.

‘ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ಮುಂಚಿತವಾಗಿ ಇರುವ ಪ್ರಕ್ರಿಯೆಗಳ ಕುರಿತ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಕೆಲ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್‌ ತಿರಸ್ಕರಿಸಿತು. ‘ಮೇಲ್ಮನವಿ ಸಲ್ಲಿಸಲು ನೀಡಿದ ಒಪ್ಪಿಗೆಯ ಪತ್ರಗಳನ್ನು ಸಲ್ಲಿಸಲು ಸರ್ಕಾರವು ಯಾವ ಹಂಗಿಗೂ ಒಳಪಟ್ಟಿಲ್ಲ’ ಎಂದು ಹೈಕೋರ್ಟ್‌ ತಿಳಿಸಿತು.

ADVERTISEMENT

ಸಿಬಿಐನ ‘ಲೀವ್‌ ಟು ಅಪೀಲ್‌’ (ಉಚ್ಛನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸಲು ನ್ಯಾಯಾಲಯ ನೀಡುವ ಒಪ್ಪಿಗೆ) ವಿಚಾರಣೆಯನ್ನು ಹೈಕೋರ್ಟ್‌ ಅಕ್ಟೋಬರ್‌ನಲ್ಲಿ ಪ್ರಾರಂಭಿಸಿತ್ತು. 2ಜಿ ಹಗರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಪ್ರಕರಣದಲ್ಲಿ ರಾಜಾ ಹಾಗೂ ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಇತರೆ ಆರೋಪಿಗಳನ್ನು 2017 ಡಿ.21ರಂದು ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.