ADVERTISEMENT

2ಜಿ ಹಗರಣ: ಪ್ರತಿಕ್ರಿಯೆ ದಾಖಲಿಸಲು ಎ.ರಾಜಾ, ಸಿಬಿಐ, ಇ.ಡಿಗೆ ಸೂಚನೆ

ಪಿಟಿಐ
Published 13 ಏಪ್ರಿಲ್ 2023, 13:48 IST
Last Updated 13 ಏಪ್ರಿಲ್ 2023, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಲು ಸಿಬಿಐ, ಇ.ಡಿ ಹಾಗೂ ಮಾಜಿ ಸಚಿವ ಎ.ರಾಜಾ ಅವರಿಗೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಸಂಬಂಧಿತ ಅರ್ಜಿದಾರರು ಗರಿಷ್ಠ ಐದು ಪುಟಗಳಿಗೆ ಮೀರದಂತೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ದಿನೇಶ್‌ ಕುಮಾರ್ ಶರ್ಮಾ ಅವರು ಸೂಚಿಸಿದರು. ಸಿಬಿಐ ಪರ ವಕೀಲರು, ಆದಷ್ಟು ಬೇಗನೆ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯನ್ನು ಮೇ 22 ಮತ್ತು 23ಕ್ಕೆ ನಿಗದಿಪಡಿಸಿದರು.

ADVERTISEMENT

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಬ್ರಿಜೇಷ್‌ ಸೇಥಿ ಹಿಂದೆ ನಿತ್ಯ ನಡೆಸುತ್ತಿದ್ದರು. ಅವರು ನವೆಂಬರ್ 30ರಂದು ನಿವೃತ್ತಿಯಾಗಿದ್ದು, ತಮ್ಮ ಪೀಠದ ಎದುರು ಇದ್ದ ಎಲ್ಲ ಪ್ರಕರಣಗಳನ್ನು ನವೆಂಬರ್ 23ರಂದು ವರ್ಗಾಯಿಸಿದ್ದರು.

ಸಿಬಿಐ ಮತ್ತು ಇಡಿ ಮೊಕದ್ದಮೆ ದಾಖಲಿಸಿದ್ದ ಪ್ರಕರಣದಲ್ಲಿ ದೋಷಮುಕ್ತರಾಗಿದ್ದ ವ್ಯಕ್ತಿಗಳು, ಸಂಸ್ಥೆಗಳು ಸಲ್ಲಿಸಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿ ನ್ಯಾಯಮೂರ್ತಿ ಸೇಥಿ ಅವರು ನಿರ್ಧಾರ ಕೈಗೊಂಡಿದ್ದರು. ಸಿಬಿಐ ದಾಖಲಿಸಿದ್ದ ಮುಖ್ಯ ಪ್ರಕರಣದ ವಿಚಾರಣೆ ಬಳಿಕ ಹೈಕೋರ್ಟ್‌, ಇ.ಡಿ ದಾಖಲಿಸಿದ್ದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆ ಕೈಗೊಂಡಿತ್ತು.

ವಿಶೇಷ ನ್ಯಾಯಾಲಯವು, ಈ ಹಗರಣಕ್ಕೆ ಸಂಬಂಧಿಸಿ ಸಿಬಿಐ ಮತ್ತು ಇಡಿ ದಾಖಲಿಸಿದ್ದ ಮೊಕದ್ದಮೆಗಳಿಗೆ ಸಂಬಂಧಿಸಿ ಆರೋಪಿಗಳಾಗಿದ್ದ ಎ.ರಾಜಾ, ಡಿಎಂಕೆ ಸಂಸದ ಕನಿಮೋಳಿ ಹಾಗೂ ಇತರರನ್ನು ಡಿಸೆಂಬರ್ 21, 2017ರಂದು ದೋಷಮುಕ್ತಗೊಳಿಸಿ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.