ADVERTISEMENT

3 ರಾಜ್ಯಗಳಲ್ಲಿ ಬಿಜೆಪಿ ಪರ ಫಲಿತಾಂಶ?

ಮತಗಟ್ಟೆ ಸಮೀಕ್ಷೆ: ಬಿಜೆಪಿಗೆ ಸಿಹಿ, ಕಾಂಗ್ರೆಸ್‌ಗೆ ಕಹಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಮುಂಬರುವ ಲೋಕಸಭಾ ಚುನಾ­ವಣೆಯ ‘ಉಪಾಂತ್ಯ ಪಂದ್ಯ’ ಎಂದೇ ಬಣ್ಣಿಸಲಾಗುತ್ತಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಮಿಜೋ­ರಾಂ ಮತ್ತು ದೆಹಲಿ  ಹೊರತುಪಡಿಸಿ ಉಳಿದ ಮೂರು ರಾಜ್ಯಗಳ ಫಲಿತಾಂಶವು ಸ್ಪಷ್ಟವಾಗಿ ಬಿಜೆಪಿ ಪರವಾಗಿರುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಪ ಸಮೀಕ್ಷೆಗಳು ಬಹುತೇಕವಾಗಿ ಅಂದಾಜಿಸಿವೆ.

ಛತ್ತೀಸಗಡ ಮತ್ತು ಮಧ್ಯಪ್ರದೇಶ­ಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳ­ಲಿದ್ದು, ಕೈತಪ್ಪಿದ್ದ ರಾಜಸ್ತಾನ ವಿಧಾನ­ಸಭೆ­ಯನ್ನು ಈ ಸಾರಿ ಬಿಜೆಪಿ ವಶಪಡಿ­ಸಿಕೊಳ್ಳುವ ಸಾಧ್ಯತೆ ಇದೆ.

ದೆಹಲಿ ವಿಧಾನಸಭೆಯು ಅತಂತ್ರವಾಗುವಂತಹ ಫಲಿತಾಂಶ  ಹೊರಬೀಳುವ ಸಾಧ್ಯತೆ ಇದ್ದರೂ, ಬಿಜೆಪಿಯು ಮುನ್ನಡೆ ಸಾಧಿಸಲಿದೆ ಎಂದು ಮತಗಟ್ಟೆ ಸಮೀಪದ ವಿವಿಧ ಸಮೀಕ್ಷೆಗಳಿಂದ ತಿಳಿದು ಬಂದಿದೆ.

40 ಸದಸ್ಯ ಬಲಹೊಂದಿರುವ ಈಶಾನ್ಯ ಭಾಗದ ಮಿಜೋರಾಂ ವಿಧಾನಸಭೆಯಲ್ಲೂ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದೂ ಸಮೀಕ್ಷೆಗಳು ಅಂದಾಜಿಸಿವೆ.

ಕಾಂಗ್ರೆಸ್‌ನಲ್ಲಿ ಆತಂಕ: ದೆಹಲಿಯಲ್ಲಿ ಬುಧವಾರ ನಡೆದ ಮತ­ದಾನದ ನಂತರ ಬಿತ್ತರವಾದ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಪ ಸಮೀಕ್ಷೆಗಳು ಕಾಂಗ್ರೆಸ್‌ನಲ್ಲಿ ಆತಂಕ ಮೂಡಿಸಿದೆ ಎನ್ನಲಾಗಿದೆ.

ಮಿಜೋರಾಂನಲ್ಲಿ ಕಾಂಗ್ರಸ್‌ಗೆ 19 ಸ್ಥಾನಗಳು, ಎಂಎನ್‌ಎಫ್‌ಎಂಪಿಸಿ ಮೈತ್ರಿಕೂಟಕ್ಕೆ 14 ಮತ್ತು ಜೆಡ್‌ಎನ್‌ಪಿಗೆ ಐದು ಸ್ಥಾನಗಳು ದೊರಕಬಹುದು ಎಂದು ‘ಟೈಮ್ಸ್‌ ನೌ ಸಿ–ವೋಟರ್‌’ ಸಮೀಕ್ಷೆ ಹೇಳಿದೆ.

ದೆಹಲಿ– ಎಎಪಿಗೆ 18 ಸ್ಥಾನ?
ಇದೇ ಮೊದಲ ಬಾರಿಗೆ ದೆಹಲಿ ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿದಿರುವ ಆಮ್‌ ಆದ್ಮಿ ಪಕ್ಷವು (ಎಎಪಿ), ಫಲಿತಾಂಶವನ್ನು ತಲೆಕೆಳಗು ಮಾಡುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 18 ಸ್ಥಾನ­ಗಳನ್ನು ಈ ಪಕ್ಷ ತನ್ನ ತೆಕ್ಕೆಗೆ ಹಾಕಿ­ಕೊಳ್ಳ­ಬಹುದು ಎಂದು ಒಂದು ಸಮೀಕ್ಷೆ ಹೇಳಿದೆ.





 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT