ADVERTISEMENT

3 ಶಾಸಕರಿಗೆ ಪೆಟ್ಟು: ಆಸ್ಪತ್ರೆಗೆ ದಾಖಲು

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಕೋಲ್ಕತ್ತ(ಪಿಟಿಐ): ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಎಡಪಕ್ಷಗಳ ಸದಸ್ಯರ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಶಾಸಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಎಡಪಕ್ಷಗಳ ಮೂವರು ಶಾಸಕರನ್ನು ಸ್ಪೀಕರ್ ಅಮಾನುತು ಮಾಡಿದ್ದಾರೆ.

ಸಿಪಿಎಂ ಶಾಸಕ ಗೌರಾಂಗ್ ಚಟರ್ಜಿ ಅವರ ತಲೆಗೆ ಪೆಟ್ಟು ಬಿದ್ದಿದೆ. ಟಿಎಂಸಿ ಶಾಸಕರಾದ ಮಹಮುದಾ ಬೇಗಂ ಅವರಿಗೆ ಎದೆಗೆ, ಪುಲೋಕ್ ರಾಯ್ ಅವರ ಕಾಲಿಗೆ ಪೆಟ್ಟು ಬಿದ್ದಿದೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ ಅಣಬೆಯಂತೆ ತಲೆ ಎತ್ತುತ್ತಿರುವ ಚಿಟ್ ಫಂಡ್‌ಗಳ ಕುರಿತು ಚರ್ಚೆಗೆ ಎಡಪಕ್ಷಗಳ ಸದಸ್ಯರು ನಿಲುವಳಿ ಸೂಚನೆ ಮಂಡಿಸಲು ಮುಂದಾದಾಗ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್  ಪೀಠದ ಸುತ್ತ ಸೇರಿ ಘೋಷಣೆಗಳನ್ನು ಕೂಗಿದರು.

ಹಿರಿಯ ಸಚಿವರಾದ ಪಾರ್ಥ ಚಟರ್ಜಿ, ಸುಬ್ರತ ಮುಖರ್ಜಿ ಮತ್ತು ಫಿರ್ಹದ್ ಹಕೀಂ ಅವರು ಸ್ಪೀಕರ್ ಬಿಮಾನ್ ಬ್ಯಾನರ್ಜಿ ಅವರ ರಕ್ಷಣೆಗೆ ಧಾವಿಸಿದರು. ಈ ಮಧ್ಯೆ, ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರು ಸ್ಪೀಕರ್ ಅವರ ಮುಂದಿನ ಅಂಕಣದತ್ತ ನುಗ್ಗಿ, ಕೂಗಾಡ ತೊಡಗಿದರು. ಚಟರ್ಜಿ ಮತ್ತು ಹಕೀಂ ಎರಡೂ ಗುಂಪಿನ ಸದಸ್ಯರನ್ನು ದೂರ ಸರಿಸಲು ಪ್ರಯತ್ನಿಸಿದರಾದರೂ ಸಿಪಿಎಂ ಸದಸ್ಯ ನಜ್‌ಮುಲ್ ಹಕ್, ಸ್ಪೀಕರ್ ಅವರ ಮುಂದಿದ್ದ ಮೈಕ್ರೊಫೋನ್ ಕಿತ್ತುಕೊಂಡರು.

ಕೂಡಲೇ ಸ್ಪೀಕರ್ ಸದನವನ್ನು ಮಧ್ಯಾಹ್ನ 1:30ಕ್ಕೆ ಮುಂದೂಡಿದರು. ಮಧ್ಯಾಹ್ನ ಮತ್ತೆ ಸದನ ಸಮಾವೇಶಗೊಂಡಾಗಲೂ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ. ಸ್ಪೀಕರ್ ಅವರಿಗೆ ಅಗೌರವ ತೋರಿದ ಎಡಪಕ್ಷಗಳ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಮುಖರ್ಜಿ ಅವರು ಒತ್ತಾಯಿಸಿದರು.

ಆಗ ಸ್ಪೀಕರ್ ಬ್ಯಾನರ್ಜಿ ಅವರು ನಜ್‌ಮುಲ್ ಹಕ್, ಸುಶಾಂತ ಬೆಸ್ರಾ ಮತ್ತು ಅಮ್ಜದ್ ಹುಸೇನ್ ಅವರನ್ನು ಅಮಾನತು ಮಾಡಿರುವುದಾಗಿ ರೂಲಿಂಗ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.