ADVERTISEMENT

ಮಧ್ಯ ಪ್ರದೇಶ: ಮಕ್ಕಳ ಕಳ್ಳರೆಂದು ಶಂಕಿಸಿ ಕಾಂಗ್ರೆಸ್‌ ನಾಯಕರ ಮೇಲೆ ಗುಂಪು ಹಲ್ಲೆ

ಏಜೆನ್ಸೀಸ್
Published 27 ಜುಲೈ 2019, 10:06 IST
Last Updated 27 ಜುಲೈ 2019, 10:06 IST
ಚಿತ್ರ ಕೃಪೆ: ಎನ್‌ಡಿಟಿವಿ
ಚಿತ್ರ ಕೃಪೆ: ಎನ್‌ಡಿಟಿವಿ   

ಭೋಪಾಲ:ಮಧ್ಯ ಪ್ರದೇಶದ ಬೈತೂಲ್‌ ಜಿಲ್ಲೆಯ ನವಲ್‌ಸಿನ್ಹ ಗ್ರಾಮದಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಮೂವರು ಕಾಂಗ್ರೆಸ್‌ ನಾಯಕರ ಮೇಲೆ ಗುಂಪೊಂದು ಇತ್ತೀಚೆಗೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂಡವೊಂದು ಮಕ್ಕಳನ್ನು ಅಪಹರಿಸಿದೆ ಎಂಬ ವದಂತಿಯಿಂದಾಗಿ ಗುರುವಾರ ರಾತ್ರಿ ಗ್ರಾಮಸ್ಥರ ಗುಂಪು ನವಲ್‌ಸಿನ್ಹ ಗ್ರಾಮದಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕರಾದ ಧರ್ಮೇಂದ್ರ ಶುಕ್ಲಾ, ಧರ್ಮು ಸಿಂಗ್ ಲಾಂಜಿವಾರ್ ಮತ್ತು ಲಲಿತ್ ಭಾಸ್ಕರ್ ಅವರಿದ್ದ ಕಾರನ್ನು ಅಡ್ಡಗಟ್ಟಿದೆ. ಮರದ ದಿಮ್ಮಿಗಳನ್ನು ರಸ್ತೆಗೆ ಅಡ್ಡವಾಗಿ ಇಟ್ಟಿರುವುದನ್ನು ಕಂಡ ‘ಕೈ’ ನಾಯಕರು ಹೆದ್ದಾರಿ ಕಳ್ಳರು ತಮ್ಮನ್ನು ತಡೆಯಲು ಸಂಚು ಹೂಡಿದ್ದಾರೆ ಎಂದು ಶಂಕಿಸಿ ಕಾರನ್ನು ತಿರುಗಿಸಿ ಮುಂದುವರಿದಿದ್ದಾರೆ. ಈ ವೇಳೆ ಗ್ರಾಮಸ್ಥರ ಗುಂಪು ಬೆನ್ನಟ್ಟಿಕೊಂಡು ಹೋಗಿ ಕಾರಿಗೆ ಹಾನಿ ಮಾಡಿದೆ. ನಂತರ ನಾಯಕರನ್ನು ಹೊರಗೆಳೆದು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಬೈತೂಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ್ ಸ್ನೇಹಿ ಮಿಶ್ರಾ ಅವರ ಹೇಳಿಕೆ ಉಲ್ಲೇಖಿಸಿಎನ್‌ಡಿಟಿವಿವರದಿ ಮಾಡಿದೆ.

ADVERTISEMENT

ಮಕ್ಕಳ ಕಳ್ಳರೆಂದು ಶಂಕಿಸಿ ಗುಂಪು ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿ ರಾಜ್ಯದಾದ್ಯಂತ ಕಳೆದ ಒಂದು ವಾರದಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೈತೂಲ್, ಇಂದೋರ್, ಭೋಪಾಲ, ಹೊಶಾಂಗಾಬಾದ್, ಸೆಹೋರ್, ನೀಮಚ್, ದಿವಾಸ್‌ ಮತ್ತು ರೈಸೆನ್‌ಗಳಲ್ಲಿ ಪ್ರಕರಣ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.