ADVERTISEMENT

ಅನಂತನಾಗ್‌: 11 ಮಂದಿ ಜೆಇಎಂ ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 13:34 IST
Last Updated 9 ಫೆಬ್ರುವರಿ 2022, 13:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಮಂಗಳವಾರ ಎರಡು ಭಯೋತ್ಪಾದಕ ಚಟುವಟಿಕೆಯ ಘಟಕಗಳನ್ನು ಪೊಲೀಸರು ಭೇದಿಸಿದ್ದು, ಜೈಶೆ–ಮೊಹಮ್ಮದ್‌ (ಜೆಇಎಂ) ಸಂಘಟನೆಯ 11 ಉಗ್ರರನ್ನು ಬಂಧಿಸಿದ್ದಾರೆ.

'ಪೊಲೀಸರು ಹಾಗೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಜೆಇಎಂ ಯೋಜಿಸುತ್ತಿದೆ ಎಂಬ ಮಾಹಿತಿ ಮೇರೆಗೆ ಅನಂತ್‌ನಾಗ್‌ನ ಶ್ರೀಗುಫ್ವಾರಾ ಹಾಗೂ ಬಿಜ್‌ಬೆಹರಾ ಪ್ರದೇಶಗಳಲ್ಲಿ ತಪಾಸಣೆಯನ್ನು ಚುರುಕುಗೊಳಿಸಲಾಗಿತ್ತು. ಸಖ್ರಾಸ್‌ನ ಚೆಕ್‌ಪೋಸ್ಟ್‌ನಲ್ಲಿ ಬೈಕ್‌ನಲ್ಲಿ ಬಂದ ಮೂವರನ್ನು ತಪಾಸಣೆಗೆ ಮುಂದಾದಾಗ ಪರಾರಿಯಾಗಲು ಯತ್ನಿಸಿದರು. ತಕ್ಷಣವೇ ಎಚ್ಚೆತ್ತ ಪೊಲೀಸರು ಆ ಮೂವರನ್ನು ಬಂಧಿಸಿದ್ದಾರೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

‘ಮೂವರನ್ನು ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಿದಾಗ ಎಲ್ಲರೂ ಜೆಇಎಂ ಸಂಘಟನೆಯ ಸಹಚರರು ಹಾಗೂ ಪಾಕಿಸ್ತಾನದ ಉಗ್ರರೊಂದಿಗೆ ನೇರ ಸಂಪರ್ಕ ಹೊಂದಿದ್ದರು ಎಂಬುದು ತಿಳಿದು ಬಂದಿದೆ. ಅವರು ಶ್ರೀಗುಫ್ವಾರದಲ್ಲಿ ಪೊಲೀಸ್‌ ಹಾಗೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಹೋಗುತ್ತಿದ್ದರು. ಈ ಮೂವರ ಮಾಹಿತಿ ಮೇರೆಗೆ ಮತ್ತಿಬ್ಬರನ್ನು ಬಂಧಿಸಲಾಯಿತು’ ಎಂದು ಅವರು ತಿಳಿಸಿದರು.

ADVERTISEMENT

‘ಬಿಜ್‌ಬೆಹರಾ ಪ್ರದೇಶದಲ್ಲಿ ನಡೆಸಿದ ಮತ್ತೊಂದು ದಾಳಿಯಲ್ಲಿ ಬಾಲಾಪರೋಪಿ ಸೇರಿ ಆರು ಉಗ್ರರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಎರಡು ಪಿಸ್ತೂಲ್‌, ಮದ್ದುಗುಂಡುಗಳು, ಶಸ್ತ್ರಾಸ್ತ್ರ ಸೇರಿದಂತೆ ಸ್ಫೋಟಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.