ADVERTISEMENT

ಕಾಶ್ಮೀರದಲ್ಲಿ ಈ ವರ್ಷ ಮೂವರು ಕಾಶ್ಮೀರಿ ಪಂಡಿತರು ಸೇರಿ 14 ಅಲ್ಪಸಂಖ್ಯಾತರ ಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 11:49 IST
Last Updated 7 ಡಿಸೆಂಬರ್ 2022, 11:49 IST
   

ನವದೆಹಲಿ: ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಕಾಶ್ಮೀರಿ ಪಂಡಿತರು ಸೇರಿ 14 ಮಂದಿ ಅಲ್ಪಸಂಖ್ಯಾತರನ್ನು ಹತ್ಯೆ ನಡೆದಿದೆ ಎಂದು ಬುಧವಾರ ಕೇಂದ್ರ ಸರ್ಕಾರ, ರಾಜ್ಯಸಭೆಗೆ ಮಾಹಿತಿ ನೀಡಿದೆ.

180 ಭಯೋತ್ಪಾದಕರು, 31 ಮಂದಿ ಭದ್ರತಾ ಸಿಬ್ಬಂದಿ ಮತ್ತು 31 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ ರಾಯ್ ವಿವರಿಸಿದ್ಧಾರೆ. ಈ ವರ್ಷ ಈವರೆಗೆ 123 ಭಯೋತ್ಪಾದಕ ಕೃತ್ಯಗಳು ನಡೆದಿವೆ ಎಂದೂ ಅವರು ಹೇಳಿದ್ದಾರೆ.

‘ಜನವರಿ, 2022ರಿಂದ ಡಿಸೆಂಬರ್, 2022ರವರೆಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಕಾಶ್ಮೀರಿ ಪಂಡಿತರು ಸೇರಿ 14 ಮಂದಿ ಅಲ್ಪಸಂಖ್ಯಾತರ ಹತ್ಯೆ ನಡೆದಿದೆ’ ಎಂದು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ ತಮ್ಮ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಕುರಿತು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಥಿರ ಭದ್ರತಾ ಸಿಬ್ಬಂದಿ, ಗಸ್ತು, 24 ಗಂಟೆ ನಾಕಾಬಂಧಿ ಸೇರಿದಂತೆ ಹಲವು ಅಲ್ಪಸಂಖ್ಯಾತರ ಸುರಕ್ಷತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಲಿದರು.

ADVERTISEMENT

2015ರ ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅಡಿ ಕಾಶ್ಮೀರದ ವಲಸೆಗಾರರಿಗಾಗಿ 3,000 ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಈ ಪೈಕಿ ಕಳೆದ 5 ವರ್ಷಗಳಲ್ಲಿ 2,639 ಉದ್ಯೋಗಗಳ ಭರ್ತಿ ಆಗಿದೆ ಎಂದು ರಾಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.